

ನಂಜನಗೂಡು: ಶಾಲೆಯ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸಲಹೆ ನೀಡಿದರು.
ಪಟ್ಟಣದ ರಾಷ್ಟ್ರಪತಿ ರಸ್ತೆಯಲ್ಲಿರುವ ನೀಲಕಂಠೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಂಜನಗೂಡು ಬ್ರಿಗೇಡ್‌ನಿಂದ ಆಯೋಜಿಸಿದ್ದ ಬಸವ ಚಿತ್ತಾರ, ಬಸವಣ್ಣ ಹಾಗೂ ಶರಣರ ಚಿತ್ರ ರಚನಾ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಾಂಸ್ಕೃತಿಕ ನಾಯಕ ಬಸವಣ್ಣನ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಭಾಗವಹಿಸಿ ಶರಣರ ಚಿತ್ರಗಳನ್ನು ಬಿಡಿಸಿ ಬಹುಮಾನ ಪಡೆದಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಹೊರಹೊಮ್ಮಲು ಸಹಕಾರಿಯಾಗಿದೆ. ಮಕ್ಕಳಲ್ಲೂ ಆತ್ಮವಿಶ್ವಾಸ ಬರುತ್ತದೆ. ಅಲ್ಲದೆ ಇಂತಹ ಸ್ಪರ್ಧೆಗಳಿಂದ ಹೆಚ್ಚಿನ ಕಲಿಕೆ ಸಾಧ್ಯವಾಗುತ್ತದೆ ಎಂದರು.
ನಂತರ ತಹಸೀಲ್ದಾರ್ ಶಿವಕುಮಾರ್ ಕಾಸನೂರು ಮಾತನಾಡಿ, ನಾನು ಸಹ ಶಾಲಾ ದಿನಗಳಲ್ಲಿ ಚಿತ್ರ ರಚನೆ ಸ್ಪರ್ಧೆಲ್ಲಿ ಭಾಗವಹಿಸಿದ್ದೆ. ಅನಿರೀಕ್ಷಿತವಾಗಿ ನನಗೆ ಅಂದು ಬಹುಮಾನ ದೊರಕಿತು. ಬರಿ ಓದಿನಲ್ಲಷ್ಟೇ ಅಲ್ಲ, ಹಲವು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ನಂಜನಗೂಡು ತಾಲೂಕಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯುವಂತಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಇದು ಒಂದು ಅತ್ಯುತ್ತಮ ಕಾರ್ಯಕ್ರಮ. 12ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲರೂ ಸಮಾನರು ಎಂದು ಸಾರಿದರು. ಕಾಯಕವೇ ಕೈಲಾಸ ಎಂಬ ನಾಣ್ನುಡಿಯಂತೆ ಎಲ್ಲರೂ ಅವರ ಕಾಯಕದಲ್ಲಿ ನಿಷ್ಠೆಯನ್ನು ಪಾಲಿಸಬೇಕು. ಕಾರ್ಯಕ್ರಮಗಳ ಜತೆಗೆ ಬಸವಣ್ಣನವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಹುಮಾನ ಪಡೆಯುವುದಕ್ಕೋಸ್ಕರ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಬಾರದು ಎಂದರು.
ವಿದ್ಯಾರ್ಥಿಗಳಿಗೆ ಮಹತಿ ಎಸ್, ಸಾರಾ, ಚೇತನ್ ಎಂ, ಮಿಮ್ಹಾ ಮೆರಿಸ್, ಸೈಯದ್ ಜಾಹಿಯಾ, ಆರ್.ಶ್ರೇಯಾಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ನಾಮ ನಿರ್ದೇಶನ ಸದಸ್ಯ ರವಿ, ಕುರಹಟ್ಟಿ ಮಹೇಶ್, ಸಿಎಂ ಶಂಕರ್, ನೀಲಕಂಠೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕುಮಾರಸ್ವಾಮಿ, ಅಬ್ದುಲ್ ಖಾದರ್, ನಗರಸಭೆ ಸದಸ್ಯ ಶೋಭಾ, ಶ್ರೀಧರ್, ಮಹದೇವ ಪ್ರಸಾದ್, ವೀರಶೈವ ಘಟಕದ ಅಧ್ಯಕ್ಷ ಮಹೇಶ್, ಎನ್.ಸಿ.ಬಸವಣ್ಣ, ಚಂದನ್‌ಗೌಡ, ಬಸವರಾಜ್, ಕಮಲೇಶ್, ರಮೇಶ್, ಪ್ರಕಾಶ್, ಯಶ್ವಂತ್, ದೀಪು, ಬಸವಯೋಗಿ, ಅಶೋಕ್ ಇತರರಿದ್ದರು.