

ಬೆಂಗಳೂರು: ಕೋಟಾ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಕಾರಣದಿಂದ ತೆರವಾಗಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ತನ್ನ ಅಚ್ಚರಿ ಅಭ್ಯರ್ಥಿಯನ್ನು ಪ್ರಕಟಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಸವಿತಾ ಸಮಾಜದ ಕಿಶೋರ್ ಕುಮಾರ್ ಪುತ್ತೂರ್ ಅವರನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪ ಚುನಾವಣೆಯ ಅಭ್ಯರ್ಥಿಯನ್ನಾಗಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಿಸಿದೆ.
ವಿಧಾನ ಪರಿಷತ್ ಒಂದು ಸ್ಥಾನಕ್ಕೆ ಉಪಚುನಾವಣೆಗಾಗಿ ಸೆ.26ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್ 3 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅ.4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಇನ್ನೂ ಅ.7ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಇನ್ನೂ ಅ.21 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಬಳಿಕ ಅಕ್ಟೋಬರ್ 24ರಂದು ಮತಎಣಿಕೆ ನಡೆಯಲಿದ್ದು ಫಲಿತಾಂಶ ಪ್ರಕಟವಾಗಲಿದೆ.
ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ ಅವರಿಗೆ ಮುಖಭಂಗವಾಗಿದೆ. ಲೋಕಾಸಭಾ ಚುನಾವಣೆಯಲ್ಲೂ ಸಹ ಟಿಕೆಟ್ ಕೈತಪ್ಪಿ ಆಗಿತ್ತು, ಇದೀಗ ವಿಧಾನಪರಿಷತ್ ಉಚಪಾವಣೆಯ ಟಿಕೆಟ್ ಸಹ ಕೈತಪ್ಪಿದೆ.