

ಕೊಳ್ಳೇಗಾಲ: ಪಟ್ಟಣದ ಅಗಸ್ತ್ಯ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ 4ನೇ ವರ್ಷದ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕುಟುಂಬ ಆಪ್ತ ಸಮಾಲೋಚಕ ಡಾ.ರೇಜೆಶ್ ಪ್ರೇಮಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಗುರುಗಳು ಶಾಲೆಯಲ್ಲಿ ಮಕ್ಕಳಿಗೆ ಹೇಳಿಕೊಟ್ಟ ಪಾಠಗಳನ್ನು ಮನೆಯಲ್ಲೂ ಅಭ್ಯಾಸ ಮಾಡಿಸುವ ಜವಾಬ್ದಾರಿ ಪಾಲಕರಾಗಿರುತ್ತದೆ. ಇದರಿಂದ ಮಕ್ಕಳಿಗೆ ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ ಎಂದರು.
ಮಕ್ಕಳ ಏಕಾಗ್ರತೆ ಹೆಚ್ಚಿಸುವ ಕಡೆ ಶಿಕ್ಷಕರು ಗಮನಹರಿಸಬೇಕು. ಆರೋಗ್ಯ ಕ್ರಮದಿಂದ ಮಕ್ಕಳಿಗೆ ಆಸಕ್ತಿ ಹೆಚ್ಚುತ್ತದೆ. ಹಾಗೆಯೇ, ವಿದ್ಯೆಯ ಜತೆಗೆ ಆತ್ಮವಿಶ್ವಾಸವನ್ನು ಮಕ್ಕಳಿಗೆ ತುಂಬಬೇಕಿದೆ ಎಂದು ಸಲಹೆ ನೀಡಿದರು.
ವೇದಿಕೆ ಮೇಲೆ ಮಕ್ಕಳು ರಾಮ, ಸೀತೆ, ಲಕ್ಷ್ಮಣ ಮತ್ತು ವಾನರ ವೇಷಭೂಷಣಗಳನ್ನು ಧರಿಸಿ ಪ್ರದರ್ಶಿಸಿದ ರಾಮಾಯಣ ನಾಟಕ ಎಲ್ಲರ ಗಮನ ಸೆಳೆಯಿತು. ನೃತ್ಯ, ಕರಾಟೆ, ಯೋಗ ಪ್ರದರ್ಶನ ಆಕರ್ಷಿಸಿತು.
ಅಗಸ್ತ್ಯ ಗುರುಕುಲ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅಚ್ಗಾಳ್ ಎನ್.ನಾಗರಾಜಯ್ಯ, ಟ್ರಸ್ಟಿ ಶ್ರೀನಿವಾಸ್, ಎನ್.ಬಿ ಮನೋಜ್ ಕುಮಾರ್, ಕಾರ್ಯದರ್ಶಿ ಸಿ.ಎಸ್.ವಿದ್ಯಾ, ಶಾಲಾ ಆಡಳಿತ ಮಂಡಳಿ ಖಂಜಾಚಿ ರವಿಕಿರಣ್ ಇದ್ದರು.