

ಮಳವಳ್ಳಿ: ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದರಿಂದ ಅವರ ಆರೋಗ್ಯ ಕೆಡುವುದರ ಜತೆಗೆ ಭವಿಷ್ಯದ ಬದುಕು ಬರಡಾಗಲಿದೆ, ಇದನ್ನು ಪಾಲಕರು ಜಾಗೃತರಾಗಿ ತಡೆಗಟ್ಟಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಮೇಲ್ವಿಚಾರಕಿ ಮಹದೇವಮ್ಮ ತಿಳಿಸಿದರು.
ತಾಲೂಕಿನ ಜಡಗನಪುರ ಗ್ರಾಮದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಬಾಲ್ಯ ವಿವಾಹ ವಿರುದ್ಧ ಕಾನೂನು ಜಾರಿಗೆ ತಂದಿದ್ದರೂ ಅಲ್ಲಲ್ಲಿ ಇಂದಿಗೂ ಬಾಲ್ಯವಿವಾಹಗಳು ನಡೆಸುತ್ತಿರುವುದು ನೋವಿನ ಸಂಗತಿ ಎಂದ ಅವರು, ಬಾಲ್ಯ ವಿವಾಹ ಮಾಡುವುದು ಅಪರಾಧವಾಗಿದ್ದು, ಇಂತಹ ಕೃತ್ಯಕ್ಕೆ ಮುಂದಾಗುವ ಕುಟುಂಬಗಳ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿ ಬಂಧಿಸಲಾಗುತ್ತದೆ. ಈ ಬಗ್ಗೆ ಮಕ್ಕಳ ಪಾಲಕರು ಕಾನೂನು ಅರಿತು ಇತರರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪ್ರಜ್ಞಾವಂತ ಸಮಾಜದಲ್ಲೂ ಇಂತಹ ಪ್ರಕರಣಗಳು ಅಲ್ಲಲ್ಲಿ ಜರುಗುತ್ತಿವೆ. ಅಂತಹ ಕುಟುಂಬದ ಪಾಲಕರಿಗೆ ಹಳ್ಳಿಗಳಲ್ಲಿ ವಿದ್ಯಾವಂತ ನಾಗಾರಿಕರು 18 ವರ್ಷ ಮೇಲ್ಪಟ್ಟ ಹುಡುಗಿ ಮತ್ತು 21 ವರ್ಷ ಮೇಲಿನ ಹುಡುಗರಿಗೆ ವಿವಾಹವಾಗಲು ಅರ್ಹರೆಂದು ಜಾಗೃತಿ ಮೂಡಿಸಬೇಕೆಂದರು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಪಿಡಿಒ ವಿಜಯಕುಮಾರ್, ಕಾರ್ಯದರ್ಶಿ ವಿನಯ್, ಅಂಗವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಹಾಜರಿದ್ದರು.