

ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗಮ್ಮ ಅನಿಸಿಕೆ
ರಾಮನಗರ
ವಿದ್ಯಾರ್ಥಿಗಳ ಸಾಧನೆಗೆ ಮನೆಯಲ್ಲಿ ಪ್ರೋತ್ಸಾಹ ಸಿಕ್ಕರೆ ಅದೇ ಜೀವನದ ಮೈಲುಗಲ್ಲಾಗುತ್ತದೆ ಎಂದು ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗಮ್ಮ ಅಭಿಪ್ರಾಯಪಟ್ಟರು.
ನಗರದ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಜಿಲ್ಲೆಯ ಪಿಯು ಟಾಪರ್ಸ್ ಹಾಗೂ ಪಾಲಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಸಂಸ್ಥೆ, ಉಪನ್ಯಾಸಕರ ಪ್ರೋತ್ಸಾಹ ವಿದ್ಯಾರ್ಥಿಗಳ ಸಾಧನೆಗೆ ಒಂದಷ್ಟು ಮೆಟ್ಟಿಲುಗಳಾಗಬಹುದು. ಆದರೆ ಮನೆಯಲ್ಲಿ ಪ್ರೋತ್ಸಾಹ ಸಿಗದಿದ್ದರೆ ಉನ್ನತ ಯಶಸ್ಸು ಕಷ್ಟಸಾಧ್ಯ ಎಂದರು.
ಶಿಕ್ಷಣ ಇಲಾಖೆಯ ಹಲವು ಕಾರ್ಯಕ್ರಮಗಳಿಗೆ ಗೌಸಿಯಾ ಇಂಜಿನಿಯರಿಂಗ್ ಕಾಲೇಜು ಸಹಕರಿಸುತ್ತದೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಎಲ್ಲ ಕಾಲೇಜು ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸುತ್ತಿರುವುದು ಶಿಕ್ಷಣ ಪ್ರೇಮವನ್ನು ತೋರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕಪಡೆದ ಜಿಲ್ಲೆಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳನ್ನು ಸತತ 4 ವರ್ಷಗಳಿಂದ ಸನ್ಮಾನಿಸಿ, ಪ್ರೋತ್ಸಾಹಿಸುವ ಗೌಸಿಯಾ ಕಾಲೇಜಿನ ಕಾರ್ಯ ಸಮಾಜ ಹಾಗೂ ಇತರ ಶಿಕ್ಷಣಸಂಸ್ಥೆಗಳಿಗೆ ಮಾದರಿ ಎಂದರು.
ವಿದ್ಯಾರ್ಥಿಗಳು ಕನಿಷ್ಠ 6 ಗಂಟೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಎಲ್‌ಕೆಜಿ ಸೇರಿ 14 ವರ್ಷ ವ್ಯಾಸಂಗ ಮಾಡಿದ್ದೀರಿ, ಇನ್ನೂ 6 ವರ್ಷ ನೀವು ಆಯ್ಕೆ ಮಾಡಿಕೊಳ್ಳುವ ವಿಭಾಗದಲ್ಲಿ ಕಠಿಣ ಶ್ರಮ ಪಟ್ಟರೆ ಭವಿಷ್ಯ ಉತ್ತಮವಾಗಿರುತ್ತದೆ. ರಾಮನಗರ ನಗರಸಭೆಯು ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗಲು ಉಚಿತ ತರಬೇತಿ ನೀಡಲು ಕ್ರಮವಹಿಸಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿ.ಶಿವಣ್ಣ ಸಲಹೆ ನೀಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ, ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿವೆ. ಸೌಲಭ್ಯಗಳನ್ನು ನೀಡುತ್ತಿವೆ. ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು, ಮುಂದೆ ಏನು ಮಾಡಬೇಕು ? ಎಂಬುದನ್ನು ಯೋಚಿಸಿ, ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಾಗಮ್ಮ ಕಿವಿಮಾತು ಹೇಳಿದರು.
ಗೌಸಿಯಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಜ್ಞಾನಭಂಡಾರದಂತಿದ್ದು, ವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪ್ರೋತ್ಸಾಹಿಸುವುದು ಸಂಸ್ಥೆಯ ನಿಲುವು. ಜಿಲ್ಲೆಯ ಎಲ್ಲ ಕಾಲೇಜುಗಳ ದ್ವಿತೀಯ ಪಿಯು ಟಾಪರ್ಸ್‌ಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಗುತ್ತಿದೆ. ಉಮ್ಮರ್ ಇಸ್ಮಾಯಿಲ್ ಖಾನ್ಗೌಸಿಯಾ ತಾಂತ್ರಿಕ, ಶೈಕ್ಷಣಿಕ ಟ್ರಸ್ಟ್‌ನ ಕಾರ್ಯದರ್ಶಿಜಿಲ್ಲೆಯ ನಾಲ್ಕೂ ತಾಲೂಕುಗಳ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಟಾಪರ್ಸ್‌ಗಳು, ಕಾಲೇಜು ಮುಖ್ಯಸ್ಥರು ಹಾಗೂ ಪಾಲಕರನ್ನು ಸನ್ಮಾನಿಸುತ್ತಿರುವುದು ಗೌಸಿಯಾ ಶಿಕ್ಷಣ ಸಂಸ್ಥೆಗೆ ಹೆಮ್ಮೆ ಎನಿಸಿದೆ.ಎಂ.ಪಿ ನಜರ್‌ವುಲ್ಲಾ ಖಾನ್ಪ್ರಾಂಶುಪಾಲ, ಗೌಸಿಯಾ ಪಿಯು ಕಾಲೇಜು