

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’
ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಐದನೇಯದಾದ ಶ್ರೀ ಪರಳಿ ವೈದ್ಯನಾಥೇಶ್ವರ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.
ಭಗವಂತ ವೈದ್ಯನಾಥನಾಗಿ ಜ್ಯೋತಿರ್ಲಿಂಗ ಸ್ವರೂಪದಲ್ಲಿ ನೆಲೆನಿಂತಿರುವ ಕ್ಷೇತ್ರ ಪರಳಿ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಪರಳಿ ಗ್ರಾಮದಲ್ಲಿರುವ ಜ್ಯೋತಿರ್ಲಿಂಗವು ಹರಿಹರರ ಸ್ವರೂಪ ಎನ್ನಲಾಗುತ್ತದೆ. ಆದ್ದರಿಂದ ಈ ಲಿಂಗವನ್ನು ಧನ್ವಂತರಿ ವೈದ್ಯನಾಥ ಎಂತಲೂ ಕರೆಯುತ್ತಾರೆ. ಮಾತಂಗನೆಂಬ ರಾಕ್ಷಸನ ಉಪಟಳವನ್ನು ನಿವಾರಿಸುವಂತೆ ಪ್ರಾರ್ಥಿಸಿ ವೈದಂಭನೆಂಬ ಋಷಿ ತಪಸ್ಸು ಮಾಡಿದಾಗ ಪ್ರಸನ್ನನಾದ ವೈದ್ಯನಾಥನು ರಾಕ್ಷಸನನ್ನು ಸಂಹರಿಸಿ ಪರಳಿಯಲ್ಲಿದ್ದ ನೀಲಗಿರಿ ಪರ್ವತದಲ್ಲಿ ಸಿಗುವ ವಿಭೂತಿಯನ್ನು ಯಾರು ಬಳಸುತ್ತಾರೋ ಅವರ ಸರ್ವರೋಗ ನಿವಾರಣೆಯಾಗುತ್ತದೆ ಎಂದು ಅಭಯವನ್ನಿತ್ತಿದ್ದಾನೆ. ಅಂತೆಯೇ ಇಂದಿಗೂ ವೈದ್ಯನಾಥ ಲಿಂಗವನ್ನು ಸ್ಪರ್ಶಿಸಿ ಪೂಜಿಸಿದರೆ ಸರ್ವರೋಗ ನಾಶವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ವೈದ್ಯನಾಥ ಕ್ಷೇತ್ರದ ಬಗ್ಗೆ ಒಂದು ಗೊಂದಲ ಕೂಡಾ ಇದೆ. ಜಾರ್ಖಂಡ್‌ನಲ್ಲಿರುವ ವೈದ್ಯನಾಥ ಧಾಮವನ್ನೇ ಜ್ಯೋತಿರ್ಲಿಂಗವೆಂದು ಪೂಜಿಸುತ್ತಾರೆ. ಆದರೆ ಜ್ಯೋತಿರ್ಲಿಂಗ ಸ್ತೋತ್ರದಲ್ಲಿ ಪರಳಿ ಹೆಸರಿದ್ದು ಮಹಾರಾಷ್ಟ್ರದ ವೈದ್ಯನಾಥನೇ ನಿಜವಾದ ಜ್ಯೋತಿರ್ಲಿಂಗ.
ಸಂಭಾಜಿನಗರದ ವಿಮಾನ ನಿಲ್ದಾಣದಿಂದ 210 ಕಿ.ಮೀ ದೂರದಲ್ಲಿರುವ ಪರಳಿಗೆ ಲಾತೂರ್ ಮತ್ತು ಬೀಡ್ ನಗರದ ಮೂಲಕ ರಸ್ತೆ ಮಾರ್ಗವಾಗಿ ಹೋಗಬಹುದು.