

ಕನಕಪುರ : ಸಾತನೂರು ಹೋಬಳಿ ಹೊನಗನಹಳ್ಳಿ ಗ್ರಾಮದಲ್ಲಿ ಓಡಾಡಲು ರಸ್ತೆ ಇಲ್ಲದೆ, ಗ್ರಾಮಸ್ಥರು ನಿತ್ಯ ಪರಿತಪ್ಪಿಸುವಂತಾಗಿದೆ.
ಹೊನಗನಹಳ್ಳಿಯಲ್ಲಿ ನಿವೇಶನ ರಹಿತ ಬಡವರ ಅನುಕೂಲಕ್ಕಾಗಿ 30 ವರ್ಷಗಳ ಹಿಂದೆ ಆಶ್ರಯ ಕಮಿಟಿ ಯೋಜನೆಯಲ್ಲಿ ಸಾಸಲಾಪುರ ಸರ್ವೇ ನಂ.128/2ರಲ್ಲಿ ಗರೀಬಿ ಸೈಟ್ ಕಾಲನಿಗೆ 52 ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡಲಾಗಿತ್ತು. ಸರ್ಕಾರಿ ಆದೇಶದಂತೆ ಈಗಾಗಲೇ ಸುಮಾರು 35 ನಿರಾಶ್ರಿತ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಓಡಾಡಲು ರಸ್ತೆ ಇಲ್ಲದೆ ಇಡೀ ಗ್ರಾಮವೇ ದಿಗ್ಬಂಧನಕ್ಕೆ ಒಳಗಾದಂತಿದೆ ಎಂದು ಗ್ರಾಮದ ಮಹಿಳೆಯರು, ವೃದ್ಧರು ಸಮಸ್ಯೆ ಬಗ್ಗೆ ಭಾನುವಾರ ಸುದ್ದಿಗಾರರೊಂದಿಗೆ ಅವಲತ್ತುಕೊಂಡರು.
ಸರ್ಕಾರ ನಿವೇಶನ ಹಂಚಿದ ಸಮಯದಲ್ಲಿ ಕಾಲುದಾರಿ ಇತ್ತು, ಅದೇ ಜಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ನನೆಗುದಿಗೆ ಬಿದ್ದಿದೆ, ನಿವೇಶನ ಹಂಚುವಾಗ ಹತ್ತು ಕುಂಟೆ ಜಾಗ ಕಾಯ್ದಿರಿಸಲಾಗಿದೆ ಎಂದು ಪಹಣಿಯಲ್ಲಿ ನಮೂದಿಸಿದ್ದಾರೆ. ಆದರೆ ರಸ್ತೆ ನಿರ್ಮಿಸಿಲ್ಲ ಎಂದು ಆರೋಪಿಸಿದರು.
ಸ್ಥಳೀಯ ಪಂಚಾಯಿತಿ ಆಡಳಿತದ ವೈಫಲ್ಯದಿಂದ ಸಮಸ್ಯೆ ಉಂಟಾಗಿದೆ, ಸಮಸ್ಯೆ ಸರಿಪಡಿಸಲು ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ರಸ್ತೆಯಿಲ್ಲದೆ ಸುತ್ತಮುತ್ತಲ ಜಮೀನುಗಳಿಂದ ತೆರಳಬೇಕಾಗಿದೆ. ಮಳೆ ಬಂದ ಸಮಯದಲ್ಲಿ ಜಮೀನುಗಳಲ್ಲಿ ಓಡಾಡಲು ತೊಂದರೆಯಾಗಿದೆ ಎಂದು ಸ್ಥಳೀಯರು ತಿಳಿಸಿದರು.
ಅಮರಣಾಂತರ ಉಪವಾಸದ ನಿರ್ಧಾರ
ಆಶ್ರಯ ನಿವೇಶನ ಮತ್ತು ಮನೆಗಳ ಸುತ್ತ ಸರ್ವೇ ಮಾಡಿಸಿರುವ ಸ್ಥಳೀಯ ಜಮೀನುದಾರರು ಅವರವರ ಜಮೀನುಗಳಿಗೆ ಬೇಲಿ ಹಾಕಿಸಿಕೊಂಡಿದ್ದಾರೆ, ಹೀಗಾಗಿ ಆಶ್ರಯ ನಿವಾಸಿಗಳು ಓಡಾಡಲು ಕಷ್ಟವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ಕ್ರಮ ಕೈಗೊಳ್ಳದಿದ್ದರೆ ಪಂಚಾಯಿತಿ ಮುಂದೆ ಅಮರಣಾಂತರ ಉಪವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ, ಇನ್ನಾದರೂ ಸರ್ಕಾರ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.
ಹೊನಗನಹಳ್ಳಿ ಆಶ್ರಯ ನಿವೇಶನಗಳಿಗೆ ದಾರಿಯ ವಿಚಾರ ಸ್ಪಷ್ಟವಾಗಿ ಗಮನಕ್ಕೆ ಬಂದಿಲ್ಲ, ಕೂಡಲೇ ಸ್ಥಳ ಪರಿಶೀಲಿಸಿ ಕಾನೂನಿನ ಪ್ರಕಾರ ರಸ್ತೆ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು. - ಭೈರಪ್ಪ, ತಾಪಂ ಇಒ