

*ಕಂಗಾಲಾದ ಜಿಲ್ಲೆಯ ಬೆಳೆಗಾರರು
* ಹತೋಟಿಗೆ ಸಿಗದೆ ಉಲ್ಬಣಿಸುತ್ತಿರುವ ರೋಗ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಪಪ್ಪಾಯ ಬೆಳೆಗೆ ಉಂಗುರ ಕಪ್ಪು ಚುಕ್ಕೆ ರೋಗ (ಯಲ್ಲೋ ಮೊಜಾಯಿಕ್ ವೈರಸ್ ಕಾರಣ) ಕಾಣಿಸಿಕೊಂಡಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಬೆಳೆಗಾರರಿಗೆ ನಿರಾಸೆ ತರಿಸಿದೆ.
ಪಪ್ಪಾಯ ರೈತರಿಗೆ ಲಾಭದಾಯಕ ಬೆಳೆಯಾಗಿದ್ದು, ಎಲ್ಲ ಕಾಲದಲ್ಲೂ ಉತ್ತಮ ಬೆಲೆ ಕಾಯ್ದುಕೊಂಡು ಬಂದಿದೆ. ಪ್ರಮುಖ ಔಷಧೀಯ ಗುಣಗಳಿರುವ ಪಪ್ಪಾಯಗೆ ಬಹು ಬೇಡಿಕೆ ಇದ್ದು, ಮಾರುಕಟ್ಟೆಯಲ್ಲಿ ಬೆಲೆ ಕಾಯ್ದುಕೊಂಡಿದೆ.
ಪಪ್ಪಾಯ ಕಡಿಮೆ ನೀರು, ಉಷ್ಣವಲಯದಲ್ಲಿ ಬೆಳೆಯುವ ಬೆಳೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಯುವ ರೈತರು ಪಪ್ಪಾಯ ಬೆಳೆಗೆ ಪ್ರಾಮುಖ್ಯತೆ ನೀಡಿದ್ದಾರೆ. ಆದರೆ, ಈಗ ತೋಟದಲ್ಲಿ ಉಂಗುರ ಕಪ್ಪು ಚುಕ್ಕೆ ರೋಗ ಕಾಣಿಸಿಕೊಂಡು ಕಾಯಿಗಳು, ಹಣ್ಣುಗಳ ಮೇಲೆ ಉಂಗುರಾಕಾರದ ರೀತಿಯಲ್ಲಿ ಕಪ್ಪುಚುಕ್ಕೆಗಳು ಮೂಡಿ ನಷ್ಟವಾಗುವ ಭೀತಿ ಎದುರಾಗಿದೆ
ಗಿಡದ ಎಲೆ, ಕಾಯಿಗಳ ಮೇಲೆ ಮೂಡುವ ಕಪ್ಪು ಚುಕ್ಕೆ ಕಾಯಿಗಳಿಗೂ ಆವರಿಸಿ ಕಪ್ಪಾಗಿ ಗುಳಿಯಂತಾಗಿ ಹಣ್ಣಾಗುವ ಸಮಯಕ್ಕೆ ಹಣ್ಣು ಕೊಳೆತು ಮರದಿಂದ ಬೀಳುತ್ತದೆ. ರೋಗ ಉಲ್ಬಣಗೊಂಡಿರುವುದರಿಂದ ರೈತರಿಗೆ ನಷ್ಟದ ಭೀತಿ ಎದುರಾಗಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಔಷ‘ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕಾಯಿ, ಎಲೆ, ಹಣ್ಣುಗಳ ಮೇಲೆ ಕಪ್ಪುಚುಕ್ಕೆ ಕಾಣಿಸಿಕೊಂಡು ಇಡೀ ತೋಟಕ್ಕೆ ಹರಡುತ್ತಿದೆ. ತೋಟಗಾರಿಕೆ ಇಲಾಖೆ ಪಪ್ಪಾಯ ತೋಟಗಳ ನಿರ್ವಹಣೆಗೆ ಉಚಿತವಾಗಿ ಔಷ‘ ನೀಡಿ, ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಬೇಕು ಎನ್ನುತ್ತಾರೆ ರೈತ ಅನಂತು.
ಎಲೆಗಳು ಹಳದಿ ಹಸಿರು ತೇಪೆಗಳಿಂದ ಕೂಡಿರುತ್ತವೆ. ಕಾಂಡ, ಎಲೆ, ಕಾಯಿ, ಹಣ್ಣಿನ ಮೇಲೆ ಕಪ್ಪು ಕಪ್ಪು ಚುಕ್ಕೆಗಳು ಉಂಗುರಾಕಾರದ ರೀತಿಯಲ್ಲಿ ಕಾಣುತ್ತವೆ. ರೋಗ ಪೀಡಿತ ಕಾಯಿಗಳು ಗಾತ್ರದಲ್ಲಿ ಸಣ್ಣದಾಗುತ್ತವೆ. ಹೂವು ಉದುರುತ್ತವೆ. ಕಾಯಿ ಕಚ್ಚುವುದಿಲ್ಲ. ಗಿಡಗಳುಬಹುಬೇಗನೆ ನೆಲಕಚ್ಚುತ್ತವೆ. ರೋಗಪೀಡಿತ ಕಾಯಿ, ಕಪ್ಪು ಚುಕ್ಕೆ ಇರುವ ಹಣ್ಣುಗಳನ್ನು ಹೆಚ್ಚುದಿನ ಶೇಖರಿಸಲು ಆಗುವುದಿಲ್ಲ. ಜತೆಗೆ ಮಾರುಕಟ್ಟೆಯಲ್ಲಿ ಇಂತಹ ಕಾಯಿಗಳಿಗೆ ಬೇಡಿಕೆಯೂ ಇರದೆ, ಹಣ್ಣುಗಳು ಉಪಯೋಗಕ್ಕೆ ಬರದಂತಾಗಿ ನಷ್ಟ ಉಂಟಾಗುತ್ತದೆ.
ಕಪ್ಪುಚುಕ್ಕೆ ಬಾಧೆ ವೈರಾಣು ರೋಗವಾಗಿದ್ದು, ಇದು ಎಲ್ಲ ಕಾಲದಲ್ಲೂ ಕಂಡುಬರುತ್ತದೆ. ಸಸಿಗಳನ್ನು ನರ್ಸರಿಯಲ್ಲಿ ನಾಟಿ ಮಾಡುವಾಗಲೇ ರೋಗ ಹತೋಟಿ ಕ್ರಮ ಅನುಸರಿಸಬೇಕು. ಪ್ರಾರಂಧದಲ್ಲೇ ರೋಗ ಕಂಡಾಗ ಸಸಿಗಳನ್ನು ಕಿತ್ತು ಸುಡಬೇಕು. ನರ್ಸರಿಯಲ್ಲಿ ವೈರಸ್ ಹರಡದಂತೆ ನೈಲಾನ್ ಜಾಳಿಗೆ ಉಪಯೋಗಿಸಬೇಕು. ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡುವುದರಿಂದ ಕಪ್ಪುಚುಕ್ಕೆ ರೋಗದಿಂದ ತಡೆಗಟ್ಟಬಹುದು. ಜತೆಗೆ ಪಪ್ಪಾಯ ತೋಟದಲ್ಲಿ ಸೂಕ್ತ ರೀತಿಯಲ್ಲಿ ಗೊಬ್ಬರ, ನೀರು ನಿರ್ವಹಣೆ ಮಾಡಿ ರೋಗ ಪೀಡಿತ ಗಿಡಗಳನ್ನು ನಾಶಪಡಿಸಬೇಕು. ಕಾಯಿಗಳ ಸುತ್ತಲೂ ನೊಣ, ವೈರೆಸ್ ಕೂರದಂತೆ ನೈಲಾನ್ ಪರದೆ ಅಳವಡಿಸಬೇಕು. ಪ್ರಾರಂಭಿಕ ಹಂತದಲ್ಲಿಯೇ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು, ಔಷಧೋಪಚಾರ ಮಾಡಿದರೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ರೋಗ ಹರಡುವುದನ್ನು ತಪ್ಪಿಸಬಹುದು ಎನ್ನುತ್ತಾರೆ ತೋಟಗಾರಿಕಾ ವಿಜ್ಞಾನಿಗಳು.
ಮಾರುಕಟ್ಟೆಯಲ್ಲಿ ಪಪ್ಪಾಯ ಬೆಲೆ ಕೆಜಿಗೆ 20 ರಿಂದ 25ರೂ. ವರೆಗೆ ಮಾರಾಟವಾಗುತ್ತಿದೆ. ರೈತರಿಗೆ 10 ರಿಂದ 12 ರೂ.ಸಿಗುತ್ತಿದೆ. ಕಪ್ಪುಚುಕ್ಕೆ ಬಾಧಿತ ಪಪ್ಪಾಯ ಕೇವಲ 5 ರಿಂದ 6 ರೂ. ಇದೆ. ಆದರೂ ಅದನ್ನು ಕೊಳ್ಳುವವರೂ ಇಲ್ಲ.
ನವೀನ್, ಪಪ್ಪಾಯ ಬೆಳೆಗಾರ ರೈತ, ನೆಲಮಲೆ.
ಮೊದಲು ಬಾಳೆ ಬೆಳೆಯುತ್ತಿದ್ದೆ. ಆನೆ ಕಾಟದಿಂದ ಬೇಸತ್ತು ಒಂದೂವರೆ ಎಕರೆ ಪ್ರದೇಶದಲ್ಲಿ 900 ಗುಳಿ ಪಪ್ಪಾಯ ತೋಟ ನಿರ್ವಹಣೆ ಮಾಡಿದ್ದೇನೆ. ಆದರೆ ಮಾರುಕಟ್ಟೆಗೆ ಹೋಗುವ ಸಮಯದಲ್ಲಿ ಕಾಯಿ, ಹಣ್ಣುಗಳ ಮೇಲೆ ಉಂಗುರ ಕಪ್ಪು ಚುಕ್ಕೆ ರೋಗ ಕಾಣಿಸಿಕೊಂಡು ಸಲಿಗೆ ಬೆಲೆ ಸಿಗದೆ ನಷ್ಟ ಹೊಂದುವಂತಾಗಿದೆ.
ಇದನ್ನು ಯಲ್ಲೋ ಮೋಜಾಯಿಕ್ ವೈರೆಸ್ ರೋಗ ಎಂದೂ ಕರೆಯಲಾಗುತ್ತದೆ. ರೋಗ ಹರಡಿದರೆ ಹತೋಟಿಗೆ ಬರಲು ಕಷ್ಟ. ರೋಗಕ್ಕೆ ರಾಸಾಯನಿಕ ಕ್ರಮ ಪರಿಣಾಮ ಅಷ್ಟೇನೂ ಬೀರುವುದಿಲ್ಲ.
ಸಿದ್ದರಾಜು, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ರಾಮನಗರ.