

ಕೆ.ಎಂ.ದೊಡ್ಡಿ: ಭಾರತೀ ವಿದ್ಯಾಸಂಸ್ಥೆ ಅಭಿವೃದ್ಧಿ ಪಥದತ್ತ ಸಾಗಲು ನನ್ನ ತಂದೆ ಜಿ.ಮಾದೇಗೌಡರಿಗೆ ದಿವಂಗತ ಚಂದೂಪುರ ಪಾಪಣ್ಣ ಹೆಗಲು ಕೊಟ್ಟಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭಾವುಕರಾದರು.
ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಜಿಪಂ ಮಾಜಿ ಸದಸ್ಯ ಚಂದೂಪುರ ಪಾಪಣ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಪಾಪಣ್ಣ ಅವರು ಶಿಸ್ತಿನ ವ್ಯಕ್ತಿತ್ವ ಹೊಂದಿದ್ದು, ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ವಿರಮಿಸುತ್ತಿರಲಿಲ್ಲ, ತಮ್ಮ ರಾಜಕೀಯ ಶಕ್ತಿಯಿಂದ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಜಿ.ಮಾದೇಗೌಡರ ಜತೆ ಉತ್ತಮ ಒಡನಾಟ ಇಟ್ಟುಕೊಂಡು, ಅವರ ಜತೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿದ್ದರು. ಅವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಒತ್ತುಕೊಟ್ಟು ಮಕ್ಕಳ ಭವಿಷ್ಯವನ್ನು ಉತ್ತಮವನ್ನಾಗಿಸಿದ ಕೀರ್ತಿ ಪಾಪಣ್ಣ ಅವರಿಗೆ ಸಲ್ಲುತ್ತದೆ. ಚಂದೂಪುರ ಎಂಬ ಕುಗ್ರಾಮದಲ್ಲಿ ಹುಟ್ಟಿದ ಪಾಪಣ್ಣ ಅವರು ಗ್ರಾಮೀಣ ಪ್ರದೇಶಕ್ಕೆ ರಾಜಕೀಯವನ್ನು ಪರಿಚಯಿಸಿದರು. ರಾಜಕೀಯದ ಶಕ್ತಿಯನ್ನು ಉಪಯೋಗಿಸಿ ಚಂದೂಪುರ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಹಾಸ್ಟೆಲ್, ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಜತೆಗೆ ಡಿ.ಕೆ.ಗೌಡ ಪ್ರೌಢಶಾಲೆಯನ್ನು ನಿರ್ಮಿಸಿ ಗ್ರಾಮೀಣ ಮಕ್ಕಳು ವಿದ್ಯೆ ಕಲಿಯಲು ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಚಂದೂಪುರ ಪಾಪಣ್ಣ ಅವರು ಶಿಕ್ಷಣ, ಆರೋಗ್ಯ, ವಿದ್ಯಾರ್ಥಿನಿಲಯಗಳು ಸೇರಿದಂತೆ ಹಲವಾರು ಸಹಕಾರ ಸಂಘಗಳನ್ನು ಜನರಿಗೆ ಉಪಯೋಗವಾಗುವಂತೆ ಶ್ರಮಿಸಿದ್ದಾರೆ, ಅವರ ಅಗಲಿಕೆ ನಾಡಿಗೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ ಎಂದರು.
ಬಿಇಟಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಆಶಯ್‌ಮಧು, ಟ್ರಸ್ಟಿಗಳಾದ ಕಾರ್ಕಹಳ್ಳಿ ಬಸವೇಗೌಡ, ಜಯರಾಮು, ಮುದ್ದಯ್ಯ, ಭಾರತೀ ಅಂಗಸಂಸ್ಥೆಯ ಮುಖ್ಯಸ್ಥರಾದ ಡಾ.ಪಿ.ನಾಗೇಂದ್ರ, ಪ್ರೊ.ಎಸ್.ನಾಗರಾಜು, ಡಾ.ತಮಿಜ್‌ಮಣಿ, ಡಾ.ಚಂದನ್, ಡಾ.ಬಾಲಸುಬ್ರಮಣ್ಯಂ, ಡಾ.ಎಸ್.ಎಲ್.ಸುರೇಶ್, ಜಿ.ಕೃಷ್ಣ, ಸಿ.ವಿ.ಮಲ್ಲಿಕಾರ್ಜುನ್, ಜಗದೀಶ್, ಪಿ.ರಾಜೇಂದ್ರರಾಜೇ ಅರಸ್, ಪ್ರಮೀಳಾ ಮತ್ತಿತರರಿದ್ದರು.