ಪುರಸಭೆ ಅಧ್ಯಕ್ಷೆಯಾಗಿ ಪಂಕಜಾ ಪ್ರಕಾಶ್ ಆಯ್ಕೆ

1 KRP
Published on

ಕೆ.ಆರ್.ಪೇಟೆ: ಪಟ್ಟಣದ ಪುರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಂಕಜಾ ಪ್ರಕಾಶ್ ಆಯ್ಕೆಯಾಗಿದ್ದಾರೆ.


ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾಂಗ್ರೆಸ್ ವತಿಯಿಂದ ಪಂಕಜಾ ಪ್ರಕಾಶ್ ಮತ್ತು ಜೆಡಿಎಸ್ ವತಿಯಿಂದ ಗಾಯತ್ರಿ ಸುಬ್ಬಣ್ಣ ನಾಮಪತ್ರ ಸಲ್ಲಿಸಿದ್ದರು.


ಪುರಸಭೆಯ ಶಹರಿ ರೋಜ್ಗಾರ್ ಭವನದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಂಕಜಾ ಪ್ರಕಾಶ್ 14 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಇವರ ಪ್ರತಿಸ್ಪರ್ಧಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗಾಯತ್ರಿ ಸುಬ್ಬಣ್ಣ ಕೇವಲ 6 ಮತಗಳನ್ನು ಪಡೆದು ಪರಾಜಿತರಾದರು.
23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ 11, ಕಾಂಗ್ರೆಸ್10, ಬಿಜೆಪಿ 1 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.


ಇವರೊಂದಿಗೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಹಾಗೂ ಜಿಲ್ಲೆಯ ಸಂಸದ ಎಚ್.ಡಿ.ಕುಮಾರಸ್ವಾಮಿ ಮತದಾನದ ಹಕ್ಕು ಹೊಂದಿದ್ದು, ಒಟ್ಟು 25 ಜನ ಮತದಾನದ ಹಕ್ಕು ಹೊಂದಿದ್ದರು.


ಕ್ಷೇತ್ರದ ಶಾಸಕ ಎಚ್.ಟಿ.ಮಂಜು, ಸಂಸದ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸದಸ್ಯ ನಟರಾಜು ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರಾದ ಶೋಭಾ ಮತ್ತು ಎಚ್.ಡಿ.ಅಶೋಕ್ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಂಕಜಾ ಪ್ರಕಾಶ್ ಪರ ಕಾಂಗ್ರೆಸ್ ಸದಸ್ಯರಾದ ಪಂಕಜಾ, ಖಮರುಲ್ಲಾ ಬೇಗಂ, ಕಲ್ಪನಾ, ಸುಗುಣ, ಸೌಭಾಗ್ಯ, ಕೆ.ಸಿ.ಮಂಜುನಾಥ್, ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು, ಕೆ.ಬಿ.ಮಹೇಶ್, ಎಚ್.ಎನ್.ಪ್ರವೀಣ್, ಪಕ್ಷೇತರ ಸದಸ್ಯ ತಿಮ್ಮೇಗೌಡ, ಜೆಡಿಎಸ್ ಸದಸ್ಯರಾದ ಗಿರೀಶ್, ಇಂದ್ರಾಣಿ ಮತ್ತು ಪದ್ಮಾ ಅವರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.


ಜೆಡಿಎಸ್ ಅಭ್ಯರ್ಥಿ ಗಾಯತ್ರಿ ಪರ ಜೆಡಿಎಸ್ ಸದಸ್ಯರಾದ ಮಹದೇವಿ ನಂಜುಂಡ, ಗಾಯತ್ರಿ ಸುಬ್ಬಣ್ಣ, ಶುಭಾ ಗಿರೀಶ್, ಎಚ್.ಆರ್.ಲೋಕೇಶ್, ಕೆ.ಎಸ್.ಸಂತೋಷ್ ಕುಮಾರ್, ಕೆ.ಎಸ್.ಪ್ರಮೋದಕುಮಾರ್ ಬೆಂಬಲ ಸೂಚಿಸಿದರು.
14 ಸದಸ್ಯರ ಬೆಂಬಲ ಪಡೆದ ಪಂಕಜಾ ಪ್ರಕಾಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಯಾಗಿದ್ದ ತಹಸೀಲ್ದಾರ್ ಎಸ್.ಯು.ಅಶೋಕ್ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net