ಉಗ್ರರಿಗೆ 5 ಕೋಟಿ ಹಣ ಪೂರೈಸಿದ್ದ ಪಂಜಿಮೊಗರು ದಂಪತಿಗೆ 10 ವರ್ಷ ಜೈಲು ಶಿಕ್ಷೆ

judge
Published on

ಮಂಗಳೂರು: ಉಗ್ರರಿಗೆ ಹಣ ಪೂರೈಸಿದ್ದ ಪಂಜಿಮೊಗರು ಮೂಲದ ದಂಪತಿ ಸೇರಿ ನಾಲ್ವರಿಗೆ ಛತ್ತೀಸ್​ಗಡ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಂಗಳೂರಿನ ಪಂಜಿಮೊಗರು ಮೂಲದ ದಂಪತಿ ಹುಸೈಸ್‌ (42) ಮತ್ತು ಆಯೆಷಾ ಬಾನು (38) ಹಾಗೂ ಧೀರಜ್‌ ಸಾವೋ (21) ಮತ್ತು ಪಪ್ಪು ಮಂಡಲ್‌ ಎಂಬುವರರು ಶಿಕ್ಷೆಗೊಳಗಾದವರು. 2013ರ ನವೆಂಬರ್‌ನಲ್ಲಿ ಬಿಹಾರ ಮತ್ತು ಛತ್ತೀಸ್‌ಗಡದಲ್ಲಿ 10ಕ್ಕೂ ಹೆಚ್ಚು ನಿಷೇಧಿತ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಅವರಿಗೆ ಹಣ ಪೂರೈಕೆ ಆಗುತ್ತಿದ್ದ ಬಗ್ಗೆ ಇಡಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ದೇಶದ ವಿವಿಧೆಡೆಯಿಂದ ಹಣ ಬರುತ್ತಿರುವುದು ಖಚಿತವಾಗಿತ್ತು. ಈ ಮಾಹಿತಿಯ ಜಾಡು ಹಿಡಿದು ಬಂದ ಪೊಲೀಸರಿಗೆ ಮಂಗಳೂರಿನ ಪಂಜಿಮೊಗರಿನಲ್ಲಿ ಹುಸೈಸ್‌ ಮತ್ತು ಆಯೆಷಾ ಬಾನು ದಂಪತಿ ಸಿಕ್ಕಿಬಿದ್ದಿದ್ದರು.

ದಂಪತಿ ತಮ್ಮ ಖಾತೆಯಿಂದ 5 ಕೋಟಿಗೂ ಹೆಚ್ಚು ಹಣವನ್ನು ಇಂಡಿಯನ್‌ ಮುಜಾಹಿದ್ದೀನ್‌ ಉಗ್ರರಿಗೆ ಪೂರೈಕೆ ಮಾಡಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಇವರ ವಿರುದ್ಧ ದೇಶ ದ್ರೋಹ ಕಾಯ್ದೆಯಡಿ ಕೇಸು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಛತ್ತೀಸ್‌ಗಡದ ರಾಯ್‌ಪುರ ಕೋರ್ಟ್ ದಂಪತಿ ಸೇರಿ ನಾಲ್ವರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net