ವಿದುಷಿ ರಾಜಮ್‌ಗೆ ಪಂಡಿತ್ ಮನ್ಸೂರ್ ಪ್ರಶಸ್ತಿ ಪ್ರದಾನ

Sudhee_04_Pandit_Mallikarjun_Mansoor_Award_@_Gayana_Samaj (4)
Published on

ಬೆಂಗಳೂರು: ಬೆಂಗಳೂರು ಕಿಡ್ನಿ ಫೌಂಡೇಷನ್ (ಬಿಕೆಎಫ್) ನಗರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 2025ನೇ ಸಾಲಿನ 20ನೇ ಧ್ವನಿ- ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದುಸ್ತಾನಿ ಸಂಗೀತೋತ್ಸವ’ದಲ್ಲಿ ಪಿಲೀಲು ವಾದಕಿ ವಿದುಷಿ ಡಾ. ಎನ್. ರಾಜಮ್ ಅವರಿಗೆ ‘ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಬಿಕೆಎಫ್ ಸಹಯೋಗದಲ್ಲಿ ಬೆಂಗಳೂರು ಗಾಯನ ಸಮಾಜದಲ್ಲಿ ಶನಿವಾರ ಏರ್ಪಡಿಸಿದ್ದ ಸಂಗೀತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಸರ್ಕಾರದ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರು 1 ಲಕ್ಷ ರೂ. ನಗದು ಹಾಗೂ ಖಂಚಿನ ಪ್ರತಿಮೆ ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಸುಧಾಕರ್ ರಾವ್ ಮಾತನಾಡಿ, ಮಲ್ಲಿಕಾರ್ಜುನ್ ಮನ್ಸೂರ್ ಅವರು ಮೂತ್ರಪಿಂಡ ಸಮಸ್ಯೆಯಿಂದ ಬೆಂಗಳೂರು ಕಿಡ್ನಿ ಫೌಂಡೇಷನ್‌ಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಲ್ಲಿ ದೊರೆತ ಚಿಕಿತ್ಸೆಯಿಂದ ಸಂತುಷ್ಟರಾಗಿದ್ದರು. ಜತೆಗೆ ಅಲ್ಲಿನ ಸಾಮಾಜಿಕ ಸೇವೆಯಿಂದ ಪ್ರೇರಿತರಾಗಿ ತಾವು ಚೇತರಿಸಿಕೊಂಡ ನಂತರ ಬಿಕೆಎ್ನ ಸೇವಾ ಕಾರ್ಯವನ್ನು ಬೆಂಬಲಿಸಲು ಸಂಗೀತ ಕಛೇರಿ ನಡೆಸಿ ಅದರಿಂದ ಗಳಿಸಿದ ಹಣವನ್ನು ಬಿಕೆಎಫ್ ಗೆ ದಾನ ಮಾಡಿದ್ದರು. ಅವರ ನಿಧನಾ ನಂತರ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ‘ಧ್ವನಿ’ ಸಂಗೀತ ಕಾರ್ಯಕ್ರಮ ಆಯೋಜಿಸುತ್ತ ಬರುತ್ತಿದ್ದೇವೆ. ಇದರಿಂದ ಸಂಗ್ರಹವಾದ ಹಣವನ್ನು ರೋಗಿಗಳ ಆರೈಕೆಗೆ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ವಿದುಷಿ ಎನ್. ರಾಜಮ್ ಮಾತನಾಡಿ, 3ನೇ ವಯಸ್ಸಿನಲ್ಲೇ ಸಂಗೀತ ಕಲಿಕೆ ಆರಂಭಿಸಿದ್ದ ನಾನು 83 ವರ್ಷಗಳ ನಿರಂತರ ಸಂಗೀತ ಸೇವೆ ಮಾಡಿದ್ದೇನೆ. ಸಂಗೀತ ಒಂದು ಬೃಹತ್ ಸಾಗರವಿದ್ದಂತೆ. ನಿರಂತರ ಅಭ್ಯಾಸದ ನಂತರವೂ ನಾನು ಇನ್ನೂ ವಿದ್ಯಾರ್ಥಿ ಎಂದೇ ಭಾವಿಸಿದ್ದೇನೆ ಎಂದು ಹೇಳಿದರು.

ಬಿಕೆಎಫ್ ಟ್ರಸ್ಟಿ ಸುಧಾಕರ್ ಶೆಣೈ, ಡಾ. ಪಿ. ಶ್ರೀರಾಮ್, ಪಿ. ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net