ಸಮುದಾಯವನ್ನು ಒಂದೇ ಗುಂಪಾಗಿ ಪರಿಗಣಿಸಲು ಹಿಂದುಳಿದ ಆಯೋಗಕ್ಕೆ ಪಂಚಪೀಠಗಳ ಒತ್ತಾಯ

pancha
Published on

ಕಲಬುರಗಿ: ವೀರಶೈವ ಲಿಂಗಾಯತ ಸಮುದಾಯದಲ್ಲಿ ಅನಾವಶ್ಯಕವಾಗಿ ಗೊಂದಲವನ್ನು ಸೃಷ್ಟಿಸಲಾಗುತ್ತಿದ್ದು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಕರ್ನಾಟಕ ಹಿಂದುಳಿದ ಆಯೋಗವು ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಒಂದೇ ಗುಂಪಾಗಿ ಪರಿಗಣಿಸಬೇಕು ಎಂದು ಪಂಚಪೀಠಗಳ ಜಗದ್ಗುರುಗಳು ಒತ್ತಾಯಿಸಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿ ಬಿಡುಗಡೆ ಮಾಡಿರುವ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ಶ್ರೀಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಶ್ರೀಕೇದಾರ ಭೀಮಾಶಂಕರ ಜಗದ್ಗುರುಗಳು, ಶ್ರೀಶೈಲ ಚನ್ನಸಿದ್ಧರಾಮ ಜಗದ್ಗುರುಗಳು, ಶ್ರೀಕಾಶಿ ಡಾ.ಚಂದ್ರಶೇಖರ ಜಗದ್ಗುರುಗಳು ಮತ್ತು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು, ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ವೀರಶೈವ ಲಿಂಗಾಯತ ಸಮುದಾಯದಲ್ಲಿ ನೂರಾರು ಕಸುಬುಗಳನ್ನು ಮಾಡುವ ಉಪಪಂಗಡಗಳಿವೆ. ಆದರೆ ಆಯೋಗ ಪ್ರಕಟ ಮಾಡಿರುವ ಜಾತಿವಾರು ಪಟ್ಟಿಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕೋಡ್ ಸಂಖ್ಯೆಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಗೊಂದಲಗಳ ನಡುವೆಯೇ ಆಯೋಗ ಅವಸರದಲ್ಲಿ ಸಮೀಕ್ಷೆಗೆ ಮುಂದಾಗಿದೆ. ಈಗಾಗಲೇ ಸಮುದಾಯದ ಜನರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಎಲ್ಲ ಮಠಾಧೀಶರು ವೀರಶೈವ ಲಿಂಗಾಯತ ಎಂದು ಬರೆಸುವಂತೆ ಸ್ಪಷ್ಟನೆಗಳನ್ನು ಕೊಟ್ಟಿದ್ದರೂ ಜನರು ಗೊಂದಲಕ್ಕೊಳಗಾಗಿ ವೀರಶೈವ, ಲಿಂಗಾಯತ, ವೀರಶೈವ ಲಿಂಗಾಯತ, ಲಿಂಗಾಯತ ವೀರಶೈವ ಅಥವಾ ತಮ್ಮ ತಮ್ಮ ಉಪಜಾತಿಗಳ ಹೆಸರನ್ನು ಮೊದಲು ಬರೆದರೂ ಆ ಎಲ್ಲ ಪದಗಳನ್ನು ಕೂಡಾ ವೀರಶೈವ ಲಿಂಗಾಯತ ಎಂಬ ಒಂದೇ ಗುಂಪು ಎಂದು ಪರಿಗಣಿಸಿ ತಮ್ಮ ದತ್ತಾಂಶವನ್ನು ಸಿದ್ಧಪಡಿಸಬೇಕು ಎಂದು ಹೇಳಿದ್ದಾರೆ.

ಕಾನೂನು ದೃಷ್ಟಿಯಿಂದ ವೀರಶೈವ ಲಿಂಗಾಯತರು ಹಿಂದೂಗಳೇ ಆಗಿದ್ದು, ಪ್ರತ್ಯೇಕ ಧರ್ಮದ ಮಾನ್ಯತೆಗೆ ಅಭಾವೀಮ ತನ್ನ ಪ್ರಯತ್ನವನ್ನು ಮುಂದುವರೆಸಲಿದೆ. ಆದರೆ ಸದ್ಯ ರಾಜ್ಯ ಸರ್ಕಾರ ಕೈಗೊಂಡಿರುವ ಸಮೀಕ್ಷೆಯಲ್ಲಿ ಜಾತಿ ನಮೂದು ಮುಖ್ಯವಾಗಿದ್ದು, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿಯಲ್ಲಿ ವೀರಶೈವ ಲಿಂಗಾಯತವೆಂದು ಉಪಜಾತಿಯಲ್ಲಿ ಅವರವರ ಪಂಗಡದ ಹೆಸರು ಬರೆಯಬೇಕು ಎಂದು ಕರೆ ನೀಡಿರುವ ಜಗದ್ಗುರು ಪಂಚಪೀಠಾಧೀಶ್ವರರು, ಸಾಮಾಜಿಕ ಸಮೀಕ್ಷೆಯಲ್ಲಿ ಬಹಳಷ್ಟು ಲೋಪ ದೋಷಗಳಿರುವುದರಿಂದ ಸೆ.22ರಿಂದ ಪ್ರಾರಂಭಿಸಲು ಹೊರಟಿರುವ ಸಮೀಕ್ಷೆಯನ್ನು ಮುಂದೂಡಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net