

ಪ್ರಶಾಂತ ರಿಪ್ಪನ್‌ಪೇಟೆ ಬೆಂಗಳೂರು : ನವರಾತ್ರಿ ಎಂದರೆ ಆದಿಶಕ್ತಿ ಆರಾಧನೆಯ ಪರ್ವಕಾಲ. ಮೈಸೂರಿನಲ್ಲಿ ಅರಮನೆ ದಸರಾ ನಡೆದರೆ; ಬಸವಕಲ್ಯಾಣದಲ್ಲಿ ಭಾವೈಕ್ಯತೆಯ ಗುರುಮನೆ ದಸರಾಕ್ಕೆ ವೇದಿಕೆ ಸಜ್ಜಾಗಿದೆ. ಶ್ರೀರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಸೆ.22 ರಿಂದ ಆರಂಭವಾಗಲಿದೆ. ಶ್ರೀ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ನಾಡಿನ ವಿವಿಧ ಪ್ರಾಂತ್ಯಗಳಲ್ಲಿ ಆಚರಿಸಿಕೊಂಡು ಬಂದ ಇತಿಹಾಸವಿದೆ. ಈ ಬಾರಿ ಸಾಮಾಜಿಕ ಕ್ರಾಂತಿಯ ಮೂಲಕ ವಿಶ್ವದ ಗಮನ ಸೆಳೆದ ಭಕ್ತಿಭಂಡಾರಿ ಬಸವಣ್ಣನವರ ಕರ್ಮಭೂಮಿಯಾಗಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ‘ಮಾನವಧರ್ಮ ಮಂಟಪ’ದಲ್ಲಿ ಹಮ್ಮಿಕೊಳ್ಳಲಾಗಿದೆ. ಬಸವನಾಡಿನಲ್ಲಿ ನಡೆಯುವ ದಸರಾ ಮಹೋತ್ಸವವು ಭಾವೈಕ್ಯತೆಯ ಸಂದೇಶವನ್ನು ಸಮಾಜಕ್ಕೆ ನೀಡಲು ಮುಂದಾಗಿದೆ.
ಆಶ್ವೀಜ ಮಾಸದ ಪ್ರತಿಪದೆಯಿಂದ ದಶಮಿ ವರೆಗಿನ 10 ದಿನಗಳ ದಸರಾ ಮಹೋತ್ಸವವು ಸೆ.22ರಿಂದ ಅ.2ರವರೆಗೆ ನಡೆಯಲಿದೆ. ದಸರಾ ಉತ್ಸವವನ್ನು ಸರ್ಕಾರ ನಾಡಹಬ್ಬದ ಹೆಸರಿನಲ್ಲಿ ಅದ್ಧೂರಿಯಾಗಿ ಆಚರಿಸುತ್ತದೆ. ಅತ್ತ ಮೈಸೂರು ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ನಮ್ಮ ಐತಿಹಾಸಿಕ ಪರಂಪರೆಯನ್ನು ಅನಾವರಣಗೊಳಿಸಿದರೆ; ಇತ್ತ ಗುರುಮನೆ ದಸರಾ ಮಹೋತ್ಸವದ ಮೂಲಕ ಧಾರ್ಮಿಕ ಪರಂಪರೆ ಅನಾವರಣಗೊಳ್ಳುತ್ತದೆ. ನಾಡಿನ ಹಲವು ಮಠ-ಪೀಠಗಳು ಶರನ್ನವರಾತ್ರಿ ಆಚರಣೆಯನ್ನು ಮಾಡುತ್ತವೆ. ಅಂತೆಯೇ ಸುದೀರ್ಘ ಇತಿಹಾಸವನ್ನು ಹೊಂದಿರುವ ಶ್ರೀರಂಭಾಪುರಿ ಪೀಠದ 118ನೇ ಜಗದ್ಗುರು ಶ್ರೀಶಿವಾನಂದ ರಾಜೇಂದ್ರ ಭಗವತ್ಪಾದರು ಶ್ರೀಪೀಠದ ಪರಿಸರದಲ್ಲಿ ನಡೆಯುತ್ತಿದ್ದ ದಸರಾ ದರ್ಬಾರನ್ನು ಮೈಸೂರು ಮಹಾರಾಜರ ಭಕ್ತಿ-ಭಿನ್ನಹದಂತೆ ಮೈಸೂರಿನಲ್ಲಿ ನಡೆಸುವ ಮೂಲಕ ಪೀಠದ ಅಂಗಳದಿಂದ ಭಕ್ತರ ಮನದಂಗಳಕ್ಕೆ ತಂದರು. ಮುಂದೆ ಶ್ರೀ ವೀರಗಂಗಾಧರ ಜಗದ್ಗುರುಗಳು, ಶ್ರೀ ವೀರರುದ್ರಮುನಿ ಜಗದ್ಗುರುಗಳು ಕೂಡಾ ಆ ಪರಂಪರೆಯನ್ನು ಮುಂದುವರೆಸಿದರು. ಸದ್ಯದ ಡಾ.ವೀರಸೋಮೇಶ್ವರ ಜಗದ್ಗುರುಗಳು ವೀರಸಿಂಹಾಸನವನ್ನು ಆರೋಹಣ ಮಾಡಿದ ನಂತರ ಶ್ರೀಪೀಠದ ದಸರಾ ಮಹೋತ್ಸವವು ಮತ್ತಷ್ಟು ವ್ಯಾಪಕತೆ ಪಡೆದುಕೊಂಡಿದ್ದು, ಕಲೆ, ಸಾಹಿತ್ಯ, ಸಂಗೀತ, ಕೃಷಿ, ಸಂಸ್ಕೃತಿ, ಧರ್ಮ, ಪರಂಪರೆ ಹೀಗೆ ಎಲ್ಲ ಆಯಾಮಗಳನ್ನು ಒಳಗೊಂಡಿದೆ.
10 ದಿನಗಳ ಕಾಲ ನಡೆಯುವ ಧರ್ಮ ಜಾಗೃತಿ ಜಾಥಕ್ಕೆ ಶ್ರೀರಂಭಾಪುರಿ ಜಗದ್ಗುರುಗಳು ಸೆ.21ರಂದು ಬಸವಕಲ್ಯಾಣ ಪುರಪ್ರವೇಶ ಮಾಡಲಿದ್ದಾರೆ. ಸೆ.22ರಂದು ಶರನ್ನವರಾತ್ರಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಹಾರಕೂಡ ಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅ.1ರವರೆಗೆ ಪ್ರತಿದಿನ ವಿವಿಧ ಮಠದ ಸ್ವಾಮೀಜಿಗಳು, ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು, ವಿದ್ವಾಂಸರು ಪಾಲ್ಗೊಂಡು ನುಡಿಸೇವೆ ಸಲ್ಲಿಸಲಿದ್ದಾರೆ. ಪ್ರತಿದಿನ ಬೆಳಗ್ಗೆ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಸಂಜೆ ಧರ್ಮ ಸಮಾವೇಶ ನಡೆಯಲಿದೆ. ಅ.2ರಂದು ಸದ್ಭಕ್ತರ ಸದಾಶಯದಂತೆ ಭವ್ಯ ಅಲಂಕೃತ ವಾಹನದಲ್ಲಿ ಅದ್ದೂರಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದ್ದು, ಶಮೀ ಪೂಜೆಯನ್ನು ನೆರವೇರಿಸುವ ಜಗದ್ಗುರುಗಳು ವೀರಸಿಂಹಾಸನವನ್ನು ಆರೋಹಣ ಮಾಡಿ ಧರ್ಮ ಸಂದೇಶ ಅನುಗ್ರಹಿಸಲಿದ್ದಾರೆ. ಗವಿಮಠದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗೆ ‘ಸಾಧನ ಸಿರಿ’ ಮುಕ್ತಿಮಂದಿರದ ಶ್ರೀವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳಿಗೆ ‘ಶಿವಾಚಾರ್ಯ ರತ್ನ’ ಸೇರಿದಂತೆ ‘ರಂಭಾಪರಿ ಯುವಸಿರಿ’, ‘ಸಾಹಿತ್ಯ ಸಿರಿ’, ‘ವೀರಶೈವ ಸಿರಿ’ ಪ್ರಶಸ್ತಿಗಳನ್ನು ಪ್ರತಿದಿನದ ಸಮಾರಂಭದಲ್ಲಿ ವಿವಿಧ ಸಾಧಕರಿಗೆ ನೀಡಿ ಜಗದ್ಗುರುಗಳು ಆಶೀರ್ವದಿಸಲಿದ್ದಾರೆ.