

ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ವೈದ್ಯರಿದ್ದು ಇವರಲ್ಲಿ ಬಹುತೇಕರಿಗೆ ಕನ್ನಡದಲ್ಲಿ ಬರೆಯುವುದಿರಲಿ, ಸರಿಯಾಗಿ ಮಾತನಾಡಲಿಕ್ಕೂ ಬರುವುದಿಲ್ಲ. ಇಂತಹವರ ನಡುವೆ ಕನ್ನಡ ವೈದ್ಯ ಸಾಹಿತ್ಯಕ್ಕೆ ಲೇಖಕ ನಾ. ಸೋಮೇಶ್ವರ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಶ್ಲಾಸಿದ್ದಾರೆ.
ಪಾಂಚಜನ್ಯ ಪ್ರತಿಷ್ಠಾನವು ಜಯನಗರದ 4ನೇ ಬ್ಲಾಕ್‌ನ ಯುವ ಪಥದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾ. ಸೋಮೇಶ್ವರ ಅವರಿಗೆ ‘ಪಾಂಚಜನ್ಯ ಪುರಸ್ಕಾರ -2024’ ಪ್ರದಾನ ಮಾಡಿ ಮಾತನಾಡಿದರು.
ಸೋಮೇಶ್ವರ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆಯುವ ಮೂಲಕ ಕನ್ನಡದಲ್ಲಿ ವೈದ್ಯಕೀಯ ಮಾಹಿತಿ ಒದಗಿಸಿದ್ದಾರೆ ಎಂದರು.
ಶಿಕ್ಷಣದಲ್ಲಿ ತಾರತಮ್ಯ ಮಾಡಬಾರದು. ನಾನು ಸರ್ಕಾರಿ ಶಾಲೆಯಲ್ಲಿ ಕಲಿತು ಈ ಮಟ್ಟಕ್ಕೆ ಬಂದಿದ್ದೇನೆ. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಇಲ್ಲ. ಮಳೆ ಬಂದರೆ ನೀರು ಸೋರುತ್ತದೆ, ಗೋಡೆಗಳು ಬಿರುಕು ಬಿಟ್ಟಿವೆ, ಬೆಂಚ್, ಡೆಸ್ಕ್‌ಗಳ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕಿದೆ ಎಂದು ಹೇಳಿದರು.
3 ತಾಸು ಪುಸ್ತಕ ಓದಿಗೆ ಮೀಸಲು: ನಾ. ಸೋಮೇಶ್ವರ ಮಾತನಾಡಿ, ವಿದ್ಯಾಭ್ಯಾಸ ಮುಂದುವರಿಸಲು ನನಗೆ ಹಣದ ಕೊರತೆ ಇತ್ತು. ಆಗ ಪತ್ರಿಕೆಗಳಿಗೆ ಲೇಖನ ಬರೆಯಲು ಆರಂಭಿಸಿದೆ. ದಿನಕ್ಕೆ ಮೂರು ತಾಸು ಪುಸ್ತಕ ಓದುತ್ತೇನೆ, ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತೇನೆ ಎಂದು ತಿಳಿಸಿದರು.
ಆರ್.ವಿ. ಶಿಕ್ಷಣ ಸಮೂಹ ಸಂಸ್ಥೆ ನಿರ್ದೇಶಕ ಡಾ. ಟಿ.ವಿ. ರಾಜು, ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ. ಕೆ.ಎಸ್. ಸಮೀರ ಸಿಂಹ, ಪ್ರತಿಷ್ಠಾನ ಟ್ರಸ್ಟಿಗಳಾದ ಎಸ್.ವಿ. ಸುಬ್ರಹ್ಮಣ್ಯ, ಆರ್.ವೆಂಕಟೇಶ್ ವೇದಾಂತಿ, ಮುರಳಿ ಎಸ್. ಕಾಕೋಳು ಇದ್ದರು.