ಮತಾಂತರ ಪ್ರಚೋದಿಸಿ ಕರಪತ್ರ!

FotoJet 0147
Published on

ಬಿಡದಿ: ಮತಾಂತರಕ್ಕೆ ಪ್ರೇರೆಪಿಸುವ ನಿಟ್ಟಿನಲ್ಲಿ ಕೋಮು ಪ್ರಚೋದಕ ಕರಪತ್ರಗಳನ್ನು ಅಂಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಜರಂಗದಳದ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಕೋಮು ಪ್ರಚೋದಕ ಭಿತ್ತಿ ಪತ್ರಗಳನ್ನು ಅಂಗಡಿಗಳ ಬಾಗಿಲು, ಬಸ್ ತಂಗುದಾಣ ಸೇರಿ ಇತರೆ ಕಡೆಗಳಲ್ಲಿ ಸೆ.1ರ ರಾತ್ರಿ ಅಂಟಿಸಿದ್ದಾರೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರುವ ಬಗ್ಗೆ ಪ್ರಚೋದನೆ ಮಾಡುವ ನಿಟ್ಟಿನಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಿದ್ದಾರೆ.

ವೃಷಭಾವತಿಪುರ, ಅಬ್ಬನಕುಪ್ಪೆ, ಮೇಡನಹಳ್ಳಿ, ಬೈರಮಂಗಲ ವೃತ್ತ, ಕಾಡುಮನೆ ರಸ್ತೆ ಸೇರಿ ಹಲವು ಕಡೆ ಪತ್ರಗಳನ್ನು ಅಂಟಿಸಿದ್ದು ಈ ಬಗ್ಗೆ ಬಜರಂಗದಳದ ಕಾರ್ಯಕರ್ತರು ಪೊಲೀಸರ ಮೊರೆ ಹೋಗಿದ್ದಾರೆ. ರಾತ್ರಿ ವೇಳೆ ಕೋಮು ಪ್ರಚೋದಕ ಪತ್ರಗಳನ್ನ ಅಂಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.

ಅಂಗಡಿ ಮಳಿಗೆಗಳಲ್ಲಿ ಅಂಟಿಸಿರುವುದಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ಮಾಡುವ ಷಡ್ಯಂತ್ರ ನಡೆಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಕೆಡಬಹುದು. ಈ ನಿಟ್ಟಿನಲ್ಲಿ ಪೊಲೀಸರು ಭಿತ್ತಿ ಪತ್ರ ಅಂಟಿಸಿರುವವರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬಿಡದಿ ಹೋಬಳಿ ಬಜರಂಗದಳದ ಅಧ್ಯಕ್ಷ ಶ್ರೀನಿಧಿ, ಪದಾಧಿಕಾರಿಗಳಾದ ಸಚಿನ್, ಜಯಣ್ಣ, ಹಾಲೇಶ್, ರಾಜೇಶ್, ಗೋಕುಲ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net