ಆತ್ಮವಿಶ್ವಾಸದಂತಹ ಮಿತ್ರ ಬೇರಿಲ್ಲ

bkt-12-7
ಕರ್ತೃ ಶ್ರೀ ಶರಣಬಸವ ಅಪ್ಪಂಗಳ ಪಲ್ಲಕ್ಕಿ ಉತ್ಸವ
Published on

ಬಾಗಲಕೋಟೆ: ಆತ್ಮವಿಶ್ವಾಸದಂತಹ ಮಿತ್ರ ಬೇರಿಲ್ಲ. ಇದು ಉನ್ನತಿಯ ಮೊದಲ ಮೆಟ್ಟಿಲು. ಆದ್ದರಿಂದ ಮೊದಲು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಿಂದ ಜರುಗಿದ ಕರ್ತೃ ಶ್ರೀ ಶರಣಬಸವ ಅಪ್ಪಂಗಳ ಪಲ್ಲಕ್ಕಿ ಉತ್ಸವ ಸಮಾರೋಪ ಸಪ್ತಾಹದಲ್ಲಿ ನೇತೃತ್ವವಹಿಸಿ ಮಾತನಾಡಿದರು.

ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ವಿವೇಕಿಯಾದವನು ಬೇರೆಯವರ ತಪ್ಪನ್ನು ಕಂಡು ತನ್ನಲ್ಲಿರುವ ತಪ್ಪನ್ನು ತಿದ್ದಿಕೊಳ್ಳುತ್ತಾನೆ. ಸುಂದರ ದಿನ ನಿರ್ಮಾಣವಾಗಲು ಒಳ್ಳೆಯ ಗುರಿಯತ್ತ ನಡೆಯಬೇಕು. ನಿರ್ಧಿಷ್ಟತೆಯ ಜೊತೆ ಓಡಬೇಕು. ಸಾಧನೆಗಳ ಜೊತೆ ಹಾರಾಡಬೇಕು.   

ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಸೂತ್ರವಾಗಿದೆ ಎಂದರು.

ಜಾನಪದ ಕಲಾತಂಡಗಳಾದ ಡೊಳ್ಳು, ಮಹಿಳಾ ಡೊಳ್ಳು, ಕರಡಿಮಜಲು, ಗೊಂಬೆಗಳು, ಭಜನೆ, ನಾದಸ್ವರ ಹಾಗೂ ಸುಮಂಗಲಿಯರು ಕಳಸಗಳೊಂದಿಗೆ ಶ್ರೀ ಶರಣಬಸವಾಶ್ರಮದಿಂದ ಪ್ರಾರಂಭವಾದ ಪಲ್ಲಕ್ಕಿ ಉತ್ಸವ ಗುರ್ಜರ್ ಲೇಔಟ್, ಪಲ್ಯಾದವರ ಚಾಳ್, ಕೆಂಪುರೋಡ್ ಮೂಲಕ ಕಾರೇಹಳ್ಳದ ಆಶ್ರಮಕ್ಕೆ ತಲುಪಿತು.

ಉತ್ಸವದಲ್ಲಿ ವೀರಣ್ಣ ಕಲ್ಲೂರು, ಸಂಗನ ಗೌಡರ, ಮರಿಯಪ್ಪ ಪಾತ್ರೋಟಿ, ಮಲ್ಲಿಕಾರ್ಜುನ ಕೊಲ್ಹಾರ, ಚಿನ್ನಪ್ಪ ಬಂಡಿವಡ್ಡರ, ವಿರುಪಾಕ್ಷಿ ಪಲ್ಯಕ್ಕೆ, ಸಿದ್ದಪ್ಪ ಕಟ್ಟಿಮನಿ, ಸಿದ್ದು ಪಾತ್ರೋಟ್ಟಿ, ಜಂಪಣ್ಣ ಕಟ್ಟಿಮನಿ, ಸುರೇಶ ಮತದಾರರ, ಲಕ್ಷ್ಮಣ ಬಂಡಿವಡ್ಡರ, ಬಸವರಾಜ ಬಂಡಿವಡ್ಡರ, ಹನುಮಂತ ಮತದಾರರ, ಚಂದ್ರು ಮಮದಾಪೂರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net