ಆದಿರಂಗನಾಥಸ್ವಾಮಿಗೆ ವೈಮಾಳಿಗೆ ಪಲ್ಲಕ್ಕಿ ಉತ್ಸವ

SRP_12-01jpj
Published on

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಶ್ರೀಆದಿರಂಗನಾಥಸ್ವಾಮಿಗೆ ದೇಗುಲದಲ್ಲಿ ಗುರುವಾರ ವಿಜೃಂಭಣೆಯಿಂದ ವೈಮಾಳಿಗೆ ಪಲ್ಲಕ್ಕಿ ಮಹೋತ್ಸವವನ್ನು ನೆರವೇರಿಸಲಾಯಿತು.


ಐತಿಹಾಸಿಕ ಶ್ರೀರಂಗನಾಥನ ದೇವಾಲಯದಲ್ಲಿ ಯುಗಾದಿ ಹಬ್ಬದ ಬಳಿಕ ಪರಂಪರಾಗತವಾಗಿ ಆಚರಿಸಿಕೊಂಡು ಬರುವ ಆಚಾರಗಳು ಹಾಗೂ ಸಂಪ್ರದಾಯಬದ್ಧ ಪೂಜೆಗಳನ್ನು ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಪಂಚಲೋಹದ ಶ್ರೀರಂಗನಾಥ ವಿಶೇಷ ಮೂರ್ತಿಗೆ ಅರ್ಪಿಸಿ ದೇಗುಲ ಮೇಲ್ಭಾಗದ ಮಾಳಿಗೆಯಲ್ಲಿ ವೈದಿಕರು ವಿಷ್ಣು ಸಹಸ್ರನಾಮಗಳ ಪಠಣೆಯೊಂದಿಗೆ 3 ಪ್ರದಕ್ಷಿಣೆ ಹಾಕಿಸುವ ಜತೆಗೆ ಪ್ರತಿಷ್ಠಾಪಿಸಲಾಯಿತು.


ದೇವಾಲಯದ ಪ್ರಧಾನ ವೈದಿಕ ಪ್ರಸನ್ನ ಹಾಗೂ ವಿಜಯಸಾರಥಿ ಸಾರಥ್ಯದಲ್ಲಿ ವಿವಿಧ ಅಭಿಷೇಕ, ವಸ್ತ್ರ-ಹೂವಿನ ಅಲಂಕಾರಗಳೊಂದಿಗೆ ರಂಗನಾಥನಿಗೆ ಬೇಸಿಗೆಯ ಶಾಖ ತಾಗದಂತೆ ಶ್ರೀಗಂಧ ಲೇಪನ ಹಾಗೂ ಪಂಚದ್ರವ್ಯಗಳ ಪ್ರೋಕ್ಷಣೆ ಮಾಡಿ ಪೂಜಿಸಿ ಸಂಗೀತದ ಗಾನ ಲಹರಿಯನ್ನು ಸ್ವಾಮಿಗೆ ಉಣಬಡಿಸಲಾಯಿತು


ಶ್ರೀರಂಗನ ಭಕ್ತರು ಸ್ವಾಮಿಗೆ ಸಲ್ಲುವ ವಿಶೇಷ ಪೂಜೆಯನ್ನು ಕಣ್ತುಂಬಿಕೊಂಡು ಒಳಿತಿಗಾಗಿ ಪ್ರಾರ್ಥಿಸಿದರು. ಬಳಿಕ ನೆರೆದಿದ್ದ ನೂರಾರು ಜನರಿಗೆ ಪಾನಕ ಹಾಗೂ ಅನ್ನಪ್ರಸಾದವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net