ಪಹಣಿ, ಹಕ್ಕುಪತ್ರಕ್ಕಾಗಿ ರೈತರ ಪರದಾಟ

FotoJet (5)
Published on

ಭೂಹಕ್ಕುದಾರರ ವೇದಿಕೆ ಅಧ್ಯಕ್ಷ ಮುನಿಕೃಷ್ಣಪ್ಪ ಆಕ್ರೋಶ

ಮಂಚೇನಹಳ್ಳಿ: ಕಳೆದ 30-40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಭೂ ಹಕ್ಕು ಮಂಜೂರಾತಿ ಪಡೆಯುವುದಕ್ಕಾಗಿ ನಮೂನೆ 53, 57ರಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಆದರೆ, ಈ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿಸುವವರು, ಕೇಳುವವರು ಯಾರು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪಿಳ್ಳೇಕಮ್ಮ ಭವನದ ಬಳಿ ವೇದಿಕೆಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ಸಾಗುವಳಿದಾರರಿಗೆ ಚೀಟಿ ನೀಡಲಾಗಿದೆ. ಆದರೆ, ಸಾಗುವಳಿ ಚೀಟಿ ನೀಡಿರುವ ಬಗ್ಗೆ ತಾಲೂಕು ಕಚೇರಿಯಲ್ಲಿ ಯಾವುದೇ ದಾಖಲೆಗಳಿಲ್ಲ. ಹಾಗಾದರೆ ಯಾರನ್ನು ಕೇಳಬೇಕು ಎನ್ನುವುದೇ ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಉಪ್ಪರಹಳ್ಳಿಯ ಸರ್ವೇ ನಂ.28ರ ಬಹುತೇಕ ರೈತರು 1988-89ರಲ್ಲಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರ ತೆಗೆದುಕೊಂಡಿದ್ದೇವೆ. ಆದರೆ, ಈಗ ತಾಲೂಕು ಕಚೇರಿಯಲ್ಲಿ ಯಾವುದೇ ದಾಖಲೆ ಇಲ್ಲ ಎನ್ನುತ್ತಿದ್ದಾರೆ. ಯಾರ ಮೊರೆ ಹೋಗುವುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮಹಿಳೆ ಲಕ್ಷ್ಮಮ್ಮ ಮಾತನಾಡಿ, 42 ವರ್ಷಗಳ ಹಿಂದೆಯೇ ಭೂಮಿಯನ್ನು ಸಮತಟ್ಟು ಮಾಡಿಸಿ, ವ್ಯವಸಾಯ ಮಾಡುತ್ತಿದ್ದೇವೆ. ನಂತರ ಬಂದವರಿಗೆಲ್ಲ ಖಾತೆ, ಪಹಣಿ ಮಾಡಿಕೊಡಲಾಗಿದೆ. ಆದರೆ ನನ್ನ ಹೆಸರಿಗೆ ಮಾತ್ರ ಮಾಡುತ್ತಿಲ್ಲ. ಕೇಳಿದರೆ ಇಲ್ಲಿ ದಾಖಲೆ ಇಲ್ಲ ಎನ್ನುತ್ತಾರೆ ಎಂದು ಅಳಲು ತೋಡಿಕೊಂಡರು.

ವೇದಿಕೆ ಸದಸ್ಯರಾದ ರಾಮಕೃಷ್ಣಪ್ಪ, ಲಕ್ಷ್ಮಮ್ಮ, ವೆಂಕಟೇಶ್, ಮಂಜುಳಮ್ಮ, ರೈತ ಸಂಘದ ಮುಖಂಡರಾದ ಲಕ್ಷ್ಮೀನಾರಾಯಣಪ್ಪ, ವರವಣಿ ನಾಗರಾಜು, ಬಗರುಕುಟ ಭೂ ಸಾಗುವಳಿದಾರರು ಹಾಗೂ ಎಎಸ್‌ಇಡಿಎ ಸಂಸ್ಥೆಯ ಬಾಲಗಂಗಾಧರ, ಸೌಭಾಗ್ಯಾ, ಸಂತೋಷ್, ವೆಂಕಟೇಶ್ ಉಪಸ್ಥಿತರಿದ್ದರು.

ತಹಸೀಲ್ದಾರ್‌ಗೆ ಮನವಿ

ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ತಿಳಿಸುವಂತೆ ತಹಸೀಲ್ದಾರ್ ದೀಪ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆದಷ್ಟು ಬೇಗ ಸಮಸ್ಯೆಯನ್ನು ಮೇಲಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ಸಚಿವರಿಗೆ ತಿಳಿಸಿ ಬಗೆಹರಿಸುವುದಾಗಿ ದೀಪ್ತಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net