ಚಿಕ್ಕಮರಳಿ ಗ್ರಾಮದಲ್ಲಿ ಕಿರುದೀವಳಿಗೆ ಪಾಡ್ಯ

27_12_Pnd_01
Published on

ಮಂಡ್ಯ: ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಹೊರವಲಯದ ಚನ್ನಿಗರಾಯಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ರಾತ್ರಿ ಕಿರು ದೀವಳಿಗೆ ಪಾಡ್ಯ ವಿಜೃಂಭಣೆಯಿಂದ ನಡೆಯಿತು.


ಕಡೆ ಕಾರ್ತಿಕ ಸೋಮವಾರ ನಂತರ ಬರುವ ಹುಣ್ಣಿಮೆಯಂದು ನಡೆಯುವ ಕಿರುದೀವಳಿಗೆ ಪಾಡ್ಯದಲ್ಲಿ 16 ಕೂಟದ ದೊರೆಯಾದ ಚಿಕ್ಕಮರಳಿ ಚನ್ನಿಗರಾಯಸ್ವಾಮಿ, ಮಂಡ್ಯ ತಾಲೂಕಿನ ಚೀರನಹಳ್ಳಿ ಹಾಲುಕಂಬಿಮಲೆ ಬೀರೇಶ್ವರಸ್ವಾಮಿ, ಮಾಡಲ…..ಗ್ರಾಮದ ಹುಚ್ಚರಾಯ ಬೀರೇಶ್ವರಸ್ವಾಮಿ, ಕೆ.ಮಲ್ಲೇನಹಳ್ಳಿ ಮರಡಿಲಿಂಗೇಶ್ವರಸ್ವಾಮಿ ದೇವರೊಂದಿಗೆ ಉತ್ಸವ ನಡೆದವು. ಮಂಗಳವಾರ ಮಧ್ಯರಾತ್ರಿ 1 ಗಂಟೆಯ ಸಮಯದಲ್ಲಿ ಚಿಕ್ಕಮರಳಿ ಗ್ರಾಮದ ಹೊರವಲಯದ 16ಕೋಟದ ದೊರೆ ಚನ್ನಿಗರಾಯಸ್ವಾಮಿ ದೇವಸ್ಥಾನದ ಮುಂಭಾಗದ ಕಟ್ಟೆಯ ಮೇಲೆ ನಾಲ್ಕು ದೇವರ ಮೂರ್ತಿಗಳಿಗೆ ಹೂ-ಹೊಂಬಾಳೆ ನಡೆಸಿ ಬಗೆಬಗೆಯ ಹೂಗಳಿಂದ ಅಲಂಕರಿಸಲಾಯಿತು.


ಹೂ-ಹೊಂಬಾಳೆ ಮುಗಿಸಿದ ಬಳಿಕ ದೇವರ ಉತ್ಸವಗಳಿಗೆ ಪಂಜಿನ ಸಲಾಮ್ ಸಲ್ಲಿಸಿದರು. ಬಾಯಿಬೀಗ, ಆರತಿಯೊತ್ತಿದ್ದ ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಾಲ್ಕು ದೇವರ ಮೂರ್ತಿಗಳನ್ನು ವೀರಗಾಸೆ ನೃತ್ಯದ ಜತೆಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಸಿದರು.


ಬಳಿಕ ಗ್ರಾಮಕ್ಕೆ ಉತ್ಸವನ್ನು ತಂದು ಮಾರಿಗುಡಿ, ಮಟ್ಟಮನೆ, ರಾಮಮಂದಿರ ಹಾಗೂ ಪಟ್ಟಲದಮ್ಮ ದೇವಸ್ಥಾನದ ಮುಂಭಾಗ ಮೆರವಣಿಗೆ ನಡೆಸಿದರು. ಮಾರಿಗುಡಿ ಬಳಿ ದೇವರ ಉತ್ಸವಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಮತ್ತೆ ಚನ್ನಿಗರಾಯಸ್ವಾಮಿ ದೇವಸ್ಥಾನದ ಬಳಿ ಉತ್ಸವ ತಂದು ಮೆರಣಿಗೆ ನಡೆಸಿ ಬುಧವಾರ ಮಧ್ಯಾಹ್ನ ಉತ್ಸವವನ್ನು ಅಂತ್ಯಗೊಳಿಸಲಾಯಿತು. ಉತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸೇರಿದಂತೆ ವಿವಿಧಡೆಯಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಭಕ್ತಭಾವ ಪ್ರದರ್ಶಿಸಿದರು. ಕಿರುದೀವಳಿಗೆ ಪಾಡ್ಯದ ಅಂಗವಾಗಿ ಗ್ರಾಮದ ಎಲ್ಲ ದೇವಸ್ಥಾನಗಳಿಗೂ ವಿಶೇಷ ವಿದ್ಯುತ್ ದೀಪಲಂಕಾರ ಮಾಡಲಾಗಿತ್ತು. ಚನ್ನಿಗರಾಯಸ್ವಾಮಿ ದೇವಸ್ಥಾನ ಬಳಿ ಅನ್ನದಾಸೋಹ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net