

ಪಡುಬಿದ್ರಿ: ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಹಾಗೂ ಚಂದ್ರಾವತಿ ಎಸ್.ಆಚಾರ್ಯ ದಂಪತಿ ಮತ್ತು ಮಕ್ಕಳು ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಕುಲಗುರು ಪೀಠಕ್ಕೆ ಸೇವಾರೂಪದಲ್ಲಿ ವಿಸ್ತೃತ ಮತ್ತು ನವೀಕೃತವಾಗಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಶ್ರೀ ಸರಸ್ವತಿ ಯಾಗಶಾಲೆಯನ್ನು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಶತಚಂಡಿಕಾ ಯಾಗದೊಂದಿಗೆ ಅ.24ರಂದು ಸಮರ್ಪಿಸಲಿದ್ದಾರೆ.
21ರಂದು ಪಾರಾಯಣ ಸಂಕಲ್ಪ-ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಶ್ರೀ ಗುರುಪಾದುಕಾ ಪೂಜೆ, ಶತಚಂಡಿ ಪಾರಾಯಣ ಪ್ರಾರಂಭ, 23ರಂದು ಮಹಾಸಂಕಲ್ಪ, ಯಾಗಶಾಲಾ ಮಂಟಪ ಸಂಸ್ಕಾರ, ವಾಸ್ತು ರಾಕ್ಷೋಘ್ನ ನವಗ್ರಹ ಸುದರ್ಶನ ಹೋಮ ಶತಚಂಡಿ ಯಾಗ ಕಲಶ ಪ್ರತಿಷ್ಠಾಪೂರ್ವಕ ಪೂರ್ವಾರಾಧನೆ, 24ರಂದು ಪ್ರಾತಃಕಾಲ 5.30ಕ್ಕೆ ಶ್ರೀ ಶತಚಂಡಿಕಾ ಮಹಾಯಾಗ ಪ್ರಾರಂಭ, 10.30ಕ್ಕೆ ಪೂರ್ಣಾಹುತಿ, ಮಹಾಪೂಜೆ, ಸುಹಾಸಿನಿ ಪೂಜೆ, ಆಚಾರ್ಯ ದಂಪತಿ ಆರಾಧನೆ, ಜಗದ್ಗುರುಗಳವರಿಂದ ಅನುಗ್ರಹ ಪ್ರಸಾದ, ತೀರ್ಥ ಪ್ರಸಾದ ವಿತರಣೆ, 11.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಬಾಯಾರು ಧಾರ್ಮಿಕ ಉಪನ್ಯಾಸ ನೀಡುವರು. ಆನೆಗುಂದಿ ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಪಡುಕುತ್ಯಾರು ಆಸ್ಥಾನ ವಿದ್ವಾಂಸರಾದ ಪಂಜ ಭಾಸ್ಕರ ಭಟ್, ಉಮೇಶ್ ಆಚಾರ್ಯ ಪಡೀಲು, ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್ ಉಡುಪಿ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಸುಧೀರ್ ಶೆಟ್ಟಿ, ಪ್ರವೀಣ್ ಆಚಾರ್ಯ ರಂಗನಕೆರೆ, ಸುಬ್ರಾಯ ಆಚಾರ್ಯ ಕೋಟ, ಜನಾರ್ದನ ಆಚಾರ್ಯ ಕಳತ್ತೂರು, ಲತಾ ಎಸ್.ಆಚಾರ್ಯ ಕುತ್ಯಾರು ಮತ್ತಿತರರು ಭಾಗವಹಿಸಲಿದ್ದಾರೆ.
2021ರಲ್ಲಿ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷರಾಗಿ ನಿಯುಕ್ತರಾದ ಶ್ರೀಧರ ಆಚಾರ್ಯರು, 2017ರಲ್ಲಿ ಶ್ರೀ ಸರಸ್ವತಿ ಯಾಗಶಾಲೆಯನ್ನು ಮಹಾಸಂಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದರು. ಇದೀಗ ಒಂದು ಸಾವಿರ ಮಂದಿ ಕುಳಿತು ಹೋಮ, ಯಜ್ಞ-ಯಾಗ ಸಮಾರಂಭವನ್ನು ವೀಕ್ಷಿಸಲು ವ್ಯವಸ್ಥೆ, ನೈವೇದ್ಯ ತಯಾರಿ ಕೊಠಡಿ, ಸಂಗ್ರಹಾಗಾರ, ಅರ್ಚಕರ ಕೊಠಡಿ ಸೇರಿದಂತೆ ಸುವ್ಯವಸ್ಥಿತ ಯಾಗಶಾಲೆಯನ್ನು ವಿಸ್ತೃತ ಮತ್ತು ನವೀಕೃತಗೊಳಿಸಲಾಗಿದೆ. ರಾಜ್ಯ ಸರ್ಕಾರ ಅನುದಾನ ಮತ್ತು ಸಮಾಜಬಾಂಧವರ ಉದಾರದಾನದ ನೆರವಿನೊಂದಿಗೆ 1.85 ಕೋಟಿ ರೂ.ವೆಚ್ಚದಲ್ಲಿ ಶ್ರೀ ಸರಸ್ವತಿ ವಿದ್ಯಾರ್ಥಿಭವನ ಮಹಾಸಂಸ್ಥಾನದಲ್ಲಿ ನಿರ್ಮಾಣಗೊಂಡಿದೆ.