

ಹೇಮನಾಥ್ ಪಡುಬಿದ್ರಿ
ಮಳೆಗಾಲ ಆರಂಭವಾಗಿ ತಿಂಗಳು ಕಳೆಯುವುದರೊಳಗೆ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ ಹೊಂಡಮಯವಾಗಿ ಸಂಚಾರಕ್ಕೆ ದುಸ್ತರವಾಗಿದೆ. ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಹೆದ್ದಾರಿಯಲ್ಲಿಯೇ ನೀರು ನಿಲ್ಲುತ್ತಿದೆ. ಇದರಿಂದ ವಾಹನ ಸವಾರರು ಸಂಕಷ್ಟಕ್ಕೊಳಗಾಗಿದ್ದು, ಪಾದಚಾರಿಗಳಿಗೆ ನಿತ್ಯ ನೀರ ಓಕುಳಿ ಕಿರಿಕಿರಿಯಾಗುತ್ತಿದೆ.
ಪಡುಬಿದ್ರಿಯಿಂದ ಕಾರ್ಕಳ ತನಕ ಹೆದ್ದಾರಿಯಲ್ಲಿ ಬರೋಬ್ಬರಿ 8ರಿಂದ 10ಕಡೆ ಹೊಂಡ ಬಿದ್ದಿದ್ದು, ಹೊಂಡ ತಪ್ಪಿಸುವ ಭರದಲ್ಲಿ ರಸ್ತೆ ಬಿಟ್ಟು ವಾಹನಗಳು ಸಂಚರಿಸುತ್ತವೆ. ಇದು ಪಾದಚಾರಿಗಳಿಗೆ ಜೀವಭಯ ಉಂಟುಮಾಡಿದೆ. 2023ರ ಡಿಸೆಂಬರ್ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಉಡುಪಿ ವಿಭಾಗ ವ್ಯಾಪ್ತಿಗೆ ಬರುವ ಪಡುಬಿದ್ರಿ ಕಾಂಜರಕಟ್ಟೆವರೆಗೆ ಹಿಂದಿದ್ದ ಸರಣಿ ರಸ್ತೆ ಉಬ್ಬುಗಳು ಹಾಗೂ ನಂದಿಕೂರು ಸೇತುವೆ ಡಾಂಬರ್ ಪೂರ್ಣ ಕಿತ್ತು ಮರು ಡಾಂಬರು ಹಾಕಲಾಗಿತ್ತು. ಮರು ಡಾಂಬಾರು ಹಾಕಿದ್ದ ಅಡ್ವೆ, ಕಾಂಜರಕಟ್ಟೆ ಪ್ರದೇಶದಲ್ಲಿ ಮತ್ತೊಮ್ಮೆ ಗುಂಡಿಯಾಗಿ ಸಂಚಾರ ದುಸ್ತರವಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ತೇಪೆ ಹಾಕುತ್ತಲೇ ಇದ್ದರೂ ಶಾಶ್ವತ ಪರಿಹಾರ ಮರೀಚಿಕೆಯಾಗಿದ್ದ ನಂದಿಕೂರು ರೈಲ್ವೆ ಸೇತುವೆಯಲ್ಲಿ ಡಾಂಬರನ್ನು ಸಂಪೂರ್ಣ ತೆರವು ಮಾಡಿ 5 ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಮರು ಡಾಂಬರು ಮಾಡಲಾಗಿತ್ತು. ಮಳೆಗಾಲ ಆರಂಭದಲ್ಲಿ ಸಣ್ಣ ಹೊಂಡವನ್ನು ಮುಚ್ಚಲಾಗಿದ್ದು, ಮತ್ತೆರಡು ಭಾಗಗಳಲ್ಲಿ ಹೊಂಡ ಬಿದ್ದಿದ್ದು, ಭಾರಿ ವಾಹನಗಳ ಓಡಾಟದಿಂದ ದಿನದಿಂದ ದಿನಕ್ಕೆ ಅದರ ಗಾತ್ರ ಹಿರಿದಾಗುತ್ತಿದೆ.
ಅಸಮರ್ಪಕ ಚರಂಡಿ: ಅಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಹೆದ್ದಾರಿ ಇಕ್ಕೆಲಗಳಲ್ಲಿ ಬೆಳೆದು ರಸ್ತೆಯನ್ನೇ ಅತಿಕ್ರಮಣ ಮಾಡಿದ ಗಿಡ-ಪೊದರುಗಳನ್ನು ತೆರವುಗೊಳಿಸದೇ ಇರುವುದರಿಂದ ಪಾದಚಾರಿಗಳಿಗೆ ಕಷ್ಟವಾಗುತ್ತಿದೆ. ಕಂಚಿನಡ್ಕ, ನಂದಿಕೂರು ವಿಶೇಷ ಆರ್ಥಿಕ ವಲಯದ ಬಳಿ ಚರಂಡಿಯೇ ಮುಚ್ಚಿ ಹೋಗಿದ್ದು, ರಸ್ತೆಯಲ್ಲೇ ನೀರು ಉಕ್ಕಿ ಹರಿಯುತ್ತಿದೆ. ಮಳೆಗಾಲ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಹಾಗೂ ತಾಲೂಕು ಆಡಳಿತದಿಂದ ಸಭೆ ನಡೆಸಿ ಚರಂಡಿ ಹೂಳೆತ್ತಲು ನಿರ್ದೇಶನ ನೀಡಿದರೂ ಇಲಾಖೆ ಅದನ್ನು ಪಾಲಿಸಿಲ್ಲ.
ಜಲಜೀವನ ಮಿಷನ್ ಯೋಜನೆಗಾಗಿ ಈ ಹೆದ್ದಾರಿಯುದ್ದಕ್ಕೂ ಪೈಪ್ಲೈನ್ ಕಾಮಗಾರಿ ನಡೆಸಲಾಗಿದ್ದು, ಅ ವೇಳೆ ಇದ್ದ ಚರಂಡಿಯೂ ಮುಚ್ಚಿ ಹೋಗಿವೆ. ಅದಲ್ಲದೆ ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿಯ ಕೈಗಾರಿಕಾ ಘಟಕವೊಂದಕ್ಕೆ ನೀರು ಸರಬರಾಜಿಗೆ ಜನರ ವಿರೋಧದ ನಡುವೆ ಪೈಪ್ಲೈನ್ ಹಾಕಲಾಗಿದ್ದು, ಅದರ ಅವಶೇಷಗಳು ಮೇಲೆದ್ದು ಅಪಾಯಕಾರಿಯಾಗುತ್ತಿವೆ.
ಹೆದ್ದಾರಿಯಲ್ಲಿನ ಗುಂಡಿಗಳಿಂದ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಗುಂಡಿ ಮುಚ್ಚುವಂತೆ ಹಾಗೂ ಚರಂಡಿ ಹೂಳೆತ್ತುವ ಬಗ್ಗೆಯೂ ಲೋಕೋಪಯೋಗಿ ಇಲಾಖೆ ಗಮನಕ್ಕೆ ತರಲಾಗಿದೆ. ನಂದಿಕೂರು ಕೈಗಾರಿಕಾ ಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೆದ್ದಾರಿ ಪ್ರವೇಶಿಸುತ್ತಿದ್ದು, ಸೂಕ್ತ ಚರಂಡಿ ನಿರ್ಮಾಣಕ್ಕೂ ಕೆಐಎಡಿಬಿ ಕ್ರಮ ವಹಿಸಬೇಕಿದೆ.-ಪ್ರವೀಣ್ಕುಮಾರ್ ಅಡ್ವೆ ಗರಡಿ ಮನೆ, ಪಲಿಮಾರು ಗ್ರಾಪಂ ಸದಸ್ಯ
ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳ ಬಗ್ಗೆ ದೂರುಗಳು ಬಂದಿದ್ದು, ತಾತ್ಕಾಲಿಕವಾಗಿ ಸರಿಪಡಿಸುವಂತೆ ಸಂಬಂಧಿತ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲಿಸಿ ಶೀಘ್ರ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.-ಮನೋಜ್ ಅಮೀನ್, ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಉಡುಪಿ ವಿಭಾಗ.