

ಉಡುಪಿ: ಕೃಷ್ಣ ಮಠದಲ್ಲಿ ಜುಲೈ 18ರಿಂದ ಚಾತುರ್ಮಾಸ್ಯ ವ್ರತ ಆರಂಭವಾಗಲಿದ್ದು, ನ.13ರವರೆಗೆ ಶಾಖಾ ವ್ರತ, ದಧಿ ವ್ರತ, ಕ್ಷೀರ ವ್ರತ, ದ್ವಿದಳ ವ್ರತ ಕಾಲದಲ್ಲಿ ಅನ್ನಪ್ರಸಾದದಲ್ಲಿ ಭಿನ್ನ ಹಾಗೂ ವಿಶಿಷ್ಟ ಆಹಾರ ಪದ್ಧತಿ ಅನುಸರಿಸಲಾಗುತ್ತದೆ.
ಶಯನೀ ದ್ವಾದಶಿಯಂದು ಪ್ರಾರಂಭವಾಗುವ ಶಾಖಾ ವ್ರತದಲ್ಲಿ ಅಡುಗೆಯಲ್ಲಿ ತರಕಾರಿ ಬಳಸುವಂತಿಲ್ಲ. ಹೀಗಾಗಿ ಹೆಸರು ಬೇಳೆ, ಉದ್ದಿನ ಬೇಳೆ, ಜೀರಿಗೆ, ಮಾವಿನ ಕಾಯಿ, ತೆಂಗಿನ ಕಾಯಿ, ಪೊಣ್ಣಂಗಣಿ ಸೊಪ್ಪು, ಬ್ರಾಹ್ಮಿ, ಕರಿಮೆಣಸುಗಳನ್ನು ಉಪಯೋಗಿಸಿಕೊಂಡು ಪದಾರ್ಥಗಳನ್ನು ತಯಾರಿಸಲಾಗುತ್ತದೆ. ದಧಿ ವ್ರತ ಕಾಲದಲ್ಲಿ ಮೊಸರು ಬಳಸುವಂತಿಲ್ಲ. ಕ್ಷೀರ ವ್ರತ ಸಮಯದಲ್ಲಿ ಹಾಲು ಸೇವನೆ ನಿಷಿದ್ಧವಾಗಿದೆ. ದ್ವಿದಳ ವ್ರತದಲ್ಲಿ ಬೇಳೆ, ತರಕಾರಿ ನಿಷಿದ್ಧ. ಹೀಗಾಗಿ ಗೆಣಸು, ಸುವರ್ಣ ಗಡ್ಡೆ, ಅರಿಶಿನ, ಜೀರಿಗೆ, ತೆಂಗಿನಕಾಯಿ, ಕರಿಮೆಣಸು, ಅವಲಕ್ಕಿ, ಹರಳು ಮೊದಲಾದವುಗಳನ್ನು ಬಳಸಿದ ಪದಾರ್ಥಗಳನ್ನು ಸೇವಿಸಲಾಗುತ್ತದೆ.