

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ವಿಶಾಲ ಹೃದಯದ ಪರಿಪೂರ್ಣತೆ ಹೊಂದಿದ ವ್ಯಕ್ತಿ ಪದ್ಮನಾಭ ಮಾಣಿಂಜ. ಜೀವಿತದ ಅಮೂಲ್ಯ ಸಮಯವನ್ನು ಸಮಾಜಕ್ಕೆ ನೀಡಿದವರು. ಜೀವಿತದಲ್ಲಿ ರಾಜರ್ಷಿಯಾಗಿದ್ದು, ಅವರ ಜೀವನ ಶೈಲಿ ಸಮಾಜಕ್ಕೆ ಸದಾ ಆದರ್ಶ ಎಂದು ಬೆಂಗಳೂರು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 14 ವರ್ಷ ಅಧ್ಯಕ್ಷರಾಗಿ, ಸಂಘದ 25 ಶಾಖೆಗಳ ರೂವಾರಿ ಈಚೆಗೆ ನಿಧನರಾದ ಎನ್.ಪದ್ಮನಾಭ ಮಾಣಿಂಜ ಅವರಿಗೆ ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಸಹಕಾರ ಸಂಘದ ಕೇಂದ್ರ ಕಚೇರಿಯ ಶ್ರೀ ಗುರು ಸಾನಿಧ್ಯ ಸಭಾಭವನದಲ್ಲಿ ಶನಿವಾರ ನಡೆದ ನುಡಿನಮನ - ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ ಭಿಡೆ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿದರು. ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಭಗೀರಥ ಜಿ ಅಧ್ಯಕ್ಷತೆ ವಹಿಸಿದ್ದರು. ಪದ್ಮನಾಭ ಮಾಣಿಂಜರ ಪುತ್ರ ಸುಧೀರ್, ಸಹಕಾರಿ ಸಂಘದ ನಿರ್ದೇಶಕರುಗಳಾದ ಕೆ.ಪಿ.ದಿವಾಕರ, ಸಂಜೀವ ಪೂಜಾರಿ, ಗಂಗಾಧರ ಮಿತ್ತಮಾರ್, ಚಂದ್ರಶೇಖರ, ತನುಜಾ ಶೇಖರ್, ಜಯವಿಕ್ರಂ ಕಲ್ಲಾಪು, ಧರಣೇಂದ್ರ ಕುಮಾರ್, ರಾಜಾರಾಮ್ ಕೆ.ಬಿ., ಚಿದಾನಂದ ಪೂಜಾರಿ, ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಇದ್ದರು. ಸಹಕಾರ ಸಂಘದ ಸಿಬ್ಬಂದಿ ಪ್ರಾರ್ಥಿಸಿದರು. ದೈನಿಕ ಠೇವಣಿ ಸಂಗ್ರಾಹಕ ವಿಶ್ವನಾಥ ನುಡಿನಮನ ಗೀತೆ ಹಾಡಿದರು. ಸಹಕಾರ ಸಂಘದ ನಿರ್ದೇಶಕ ಜಗದಿಶ್ಚಂದ್ರ ಡಿ.ಕೆ.ಸ್ವಾಗತಿಸಿದರು. ನಿರ್ದೇಶಕ ಆನಂದ ಪೂಜಾರಿ ಸರ್ವದೋಳ ವಂದಿಸಿದರು. ನೆಲ್ಯಾಡಿ ಶಾಖಾ ವ್ಯವಸ್ಥಾಪಕ ಪ್ರದೀಶ್ ನಿರೂಪಿಸಿದರು. ಪದ್ಮನಾಭ ಮಾಣಿಂಜ ಕ್ಲಿಷ್ಟ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿದವರು. ತನ್ನ ನಿಲುವಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳದ ಅವರು ಎಲ್ಲಿಯೂ ನಿಷ್ಠುರತೆ ಬೆಳೆಸಿಕೊಂಡವರಲ್ಲ. ಎಲ್ಲವೂ ಇದ್ದು, ತನ್ನದು ಯಾವುದೂ ಅಲ್ಲ ಎಂಬ ಸ್ಪಷ್ಟತೆ ಇದ್ದವರು. ಅವರ ಶರೀರ ದೂರವಾದರೂ ಶಕ್ತಿ ನಮ್ಮೊಳಗೆ ಶಾಶ್ವತವಾಗಿ ಇರಬೇಕು.
ತಾನು ಎಷ್ಟು ಎತ್ತರಕ್ಕೆ ಏರಿದರೂ ದರ್ಪ ಬೆಳೆಸಿಕೊಳ್ಳದೆ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿದವರು ಪದ್ಮನಾಭರು. ಕನ್ಯಾಡಿ ಶ್ರೀ ರಾಮ ಕ್ಷೇತ್ರ ನಿರ್ಮಾಣದಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳ ಜತೆ ಗಟ್ಟಿಯಾಗಿ ನಿಂತವರು.
ಪದ್ಮನಾಭರು ಯಾವುದೇ ಕಾರ್ಯ ಪ್ರಚಾರಕ್ಕಾಗಿ ಮಾಡುತ್ತಿರಲಿಲ್ಲ. ಅವರಲ್ಲಿ ಆ ಕಾರ್ಯದ ದೂರದೃಷ್ಟಿಯ ಜತೆಗೆ ಪ್ರಾಮಾಣಿಕ ಮತ್ತು ನಿಷ್ಕಲ್ಮಶ ಮನಸ್ಸು ಸದಾ ಇರುತಿತ್ತು. ಕನ್ಯಾಡಿ ಶ್ರೀರಾಮ ಕ್ಷೇತ್ರ , ಶ್ರೀ ಗುರುದೇವ ವಿದ್ಯಾಸಂಸ್ಥೆ ಮತ್ತು ಸಹಕಾರಿ ಸಂಘ ಸ್ಥಾಪನೆಯಲ್ಲಿ ದೊಡ್ಡ ಕಾಣಿಕೆ ನೀಡಿದವರು.