

ಸರಗೂರು: ತಾಲೂಕಿನ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡುತ್ತಿರುವುದರಿಂದ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಬೆಳೆಗಳು ಜಲಾವೃತಗೊಂಡಿದ್ದು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊತ್ತೇಗಾಲ ಗ್ರಾಮದ ಶಿವಲಿಂಗಪ್ಪ ಅವರು 10 ಎಕರೆಯಲ್ಲಿ ಭತ್ತ ಬೆಳೆದಿದ್ದರು. ವಾರದಲ್ಲೇ ಕಟಾವು ಮಾಡಬೇಕಿತ್ತು. ಆದರೆ, ನದಿ ಪ್ರವಾಹದಿಂದ ಬೆಳೆ ಜಲಾವೃತವಾಗಿದೆ. ಹಲವೆಡೆ ಭತ್ತ, ರಾಗಿ, ಚೆಂಡು ಹೂ, ಕಬ್ಬು, ತೊಗರಿ ಬೆಳೆಗಳು ನೀರು ಪಾಲಾಗಿವೆ. ಬೆಳೆ ಕಳೆದುಕೊಂಡಿರುವ ರೈತರಿಗೆ ತಕ್ಷಣ ಬೆಳೆ ಪರಿಹಾರ ನೀಡಬೇಕು ಎಂದು ರೈತ ಶಿವಲಿಂಗಪ್ಪ ಒತ್ತಾಯಿಸಿದ್ದಾರೆ.
ಕಬಿನಿ ಜಲಾಶಯ ಸಮೀಪದ ತುಂಬಸೋಗೆ ಸೇತುವೆ ಮುಳುಗುವ ಸಾಧ್ಯತೆ ಇದೆ. ಇದರಿಂದ ಸರಗೂರು-ಕೋಟೆ-ಮೈಸೂರು ಮಾರ್ಗಕ್ಕೆ ವಾಹನ ಸಂಚಾರ ಕಷ್ಟವಾಗಲಿದೆ. ಜನಪ್ರತಿನಿಧಿಗಳಿಗೆ ಎತ್ತರದ ಸೇತುವೆ ನಿರ್ಮಾಣ ಮಾಡಿ ಎಂದು ಮನವಿ ಮಾಡಿದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ತಾಲೂಕು ಆಡಳಿತವೂ ಚಿಂತಿಸಿಲ್ಲ. ಅಧಿಕಾರಿಗಳು ನೆರೆ ಬಂದಾಗ ಮಾತ್ರ ಇತ್ತ ಕಡೆ ಗಮನಹರಿಸುತ್ತಾರೆ. ನಮ್ಮ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.