

ಗುರುಪುರ: ಇಲ್ಲಿನ ಕೈಕಂಬದಿಂದ ಕಂದಾವರ ಪದವು ಮೂಳೂರು ಪದವು ಮೂಲಕ ಆದ್ಯಪಾಡಿ ಬಜ್ಪೆ ಅಂತಾರಾಷ್ಟ್ರೀಯ ವಿವಾನ ನಿಲ್ದಾಣ, ಕಾವೂರು ಮರವೂರು ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಒಳರಸ್ತೆಯ ಪಡ್ಡಾಯಿಪದವಿನ ಸ್ಕಂದನಗರ ರಸ್ತೆಯು ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಸಂಬಂಧಪಟ್ಟ ಇಲಾಖೆ ರಸ್ತೆ ದುರಸ್ತಿಗೆ ಈವರೆಗೂ ಮುಂದಾಗದ ಹಿನ್ನೆಲೆಯಲ್ಲಿ ಸ್ಥಳೀಯರು, ‘ಪಿಡಬ್ಲ್ಯುಡಿ ಅಧಿಕಾರಿಗಳು ಇಲ್ಲಿ ಮಲಗಿದ್ದಾರೆ. ತಮ್ಮ ವಾಹನವನ್ನು ನಿಧಾನವಾಗಿ ಚಲಾಯಿಸಿರಿ’ ಎಂಬ ಬ್ಯಾನರ್ ಅಳವಡಿಸಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡ್ಡಾಯಿಪದವು ಸಹಿತ ಸ್ಕಂದನಗರ ಆಸುಪಾಸಿನಲ್ಲಿ ಹಲವು ಕುಟುಂಬಗಳು 5 ಸೆಂಟ್ಸ್ ಜಾಗದಲ್ಲಿ ವಾಸಿಸುತ್ತಿವೆ. ಗುರುಪುರ ಕೈಕಂಬದಿಂದ ಇಲ್ಲಿಗೆ ಸಂಪರ್ಕದ ಮುಖ್ಯ ರಸ್ತೆ ಇದಾಗಿದೆ. ಹಿಂದೆ ಈ ರಸ್ತೆ ಗುರುಪುರ, ಬಳಿಕ ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಆಗ ವರ್ಷಕ್ಕೊಂದು ಬಾರಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿತ್ತು. ಇದೀಗ ಪಿಡಬ್ಲ್ಯುಡಿ ಸುಪರ್ದಿಗೆ ಬಂದಿರುವ ಈ ರಸ್ತೆಗೆ ಇದುವರೆಗೆ ದುರಸ್ತಿ ಭಾಗ್ಯ ಬಂದಿಲ್ಲ. ಪಡ್ಡಾಯಿಪದವಿನಲ್ಲಿ ಸುವಾರು 50 ಮೀಟರ್ ಉದ್ದಕ್ಕೆ ರಸ್ತೆ ಡಾಂಬರು ಕಿತ್ತು ಹೋಗಿ, ಹೊಂಡಗಳು ಸೃಷ್ಟಿಯಾಗಿವೆ. ರಸ್ತೆ ಹೊಂಡಗಳಿಂದ ಮಳೆಗಾಲದಲ್ಲಿ ಹತ್ತಿರದ ಮನೆಗಳಿಗೆ ಪುಕ್ಕಟೆ ಕೆಸರು ಪೈಂಟಿಂಗ್ ಆಗುತ್ತದೆ. ಹೊಂಡಗುಂಡಿಗಳಲ್ಲಿ ದ್ವಿಚಕ್ರ ವಾಹನ ಮತ್ತು ರಿಕ್ಷಾಗಳು ಸರ್ಕಸ್ ವಾಡಿಕೊಂಡು ಮುಂದುವರಿಯಬೇಕಾಗುತ್ತವೆ. ಆಯತಪ್ಪಿದ ವಾಹನಗಳು ಪಲ್ಟಿ ಹೊಡೆಯುತ್ತವೆ. ರಾತ್ರಿ ವೇಳೆ ಈಗಾಗಲೇ ಕೆಲವು ದ್ವಿಚಕ್ರ ವಾಹನಗಳು ಉರುಳಿ ಬಿದ್ದು, ಸವಾರರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಪಡ್ಡಾಯಿಪದವಿನ ಸ್ಕಂದನಗರದಲ್ಲಿ ಪಿಡಬ್ಲ್ಯುಡಿ ರಸ್ತೆ ಹದಗೆಟ್ಟಿದೆ. ಎರಡು ವರ್ಷದಿಂದ ರಸ್ತೆ ದುರಸ್ತಿ ಆಗಿಲ್ಲ. ಸುವಾರು 50 ಮೀಟರ್ ಸಂಪೂರ್ಣ ಹದಗೆಟ್ಟು ಉದ್ದಕ್ಕೆ ಹೊಂಡಗಳು ಸೃಷ್ಟಿಯಾಗಿವೆ. ಬೇಸಿಗೆಯಲ್ಲಿ ಧೂಳಿನ ಸಮಸ್ಯೆ ಕಾಡುತ್ತದೆ. ಮಳೆಗಾಲದಲ್ಲಿ ಸಾಕಷ್ಟು ನೀರು ತುಂಬಿರುತ್ತದೆ. ಹಾಗಾಗಿ ಎಲ್ಲ ಸಂದರ್ಭದಲ್ಲೂ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಪಾಯಕಾರಿಯಾಗಿ ಪರಿವರ್ತನೆಗೊಂಡಿದ್ದು, ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಮನಸ್ಸು ವಾಡಬೇಕು. ರಿಚರ್ಡ್ ಸಿಕ್ವೇರ, ಪಡ್ಡಾಯಿಪದವು ನಿವಾಸಿ.