

ಬೆಂಗಳೂರು/ಮೈಸೂರು: ರಾಜ್ಯದ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಸಕಾಲಕ್ಕೆ ಆಕ್ಸಿಜನ್ ಸಿಗದೆ ಕೋವಿಡ್ ಸೋಂಕಿತರು ಮಾತ್ರವಲ್ಲದೆ ಸಾಮಾನ್ಯ ರೋಗಿಗಳು ಪರದಾಡುವಂತಾಗಿದೆ. ಆಮ್ಲಜನಕ ಪೂರೈಕೆ ವ್ಯತ್ಯಯದಿಂದ ಚಿಕಿತ್ಸೆ ಒದಗಿಸಲು ವೈದ್ಯರು ಒದ್ದಾಡುವಂತಾಗಿದೆ. ಪ್ರಸ್ತುತ ಕೋವಿಡ್ನಿಂದಾಗಿ ಆಮ್ಲಜನಿಕದ ಬೇಡಿಕೆ ಎಲ್ಲ ಆಸ್ಪತ್ರೆಗಳಿಂದಲೂ ಹೆಚ್ಚಾಗಿದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗದ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಮ್ಲಜನಕ ಸಂಗ್ರಹಿಸುವುದಿರಲಿ, ದೈನಂದಿನ ಅಗತ್ಯತೆ ಪೂರೈಸುವುದೂ ಕಷ್ಟವಾಗಿದೆ.
ಇದನ್ನೂ ಓದಿ: ದೇಶದಲ್ಲಿ ಕೊನೆಗೂ ತಗ್ಗಿತು ಕರೊನಾ ವೈರಸ್ನ ವೇಗ…
ಕೊರತೆಗೆ ಕಾರಣಗಳು? ಆಮ್ಲಜನಕದ ಟ್ಯಾಂಕರ್ ಬರುವುದು ವಿಳಂಬ, ಆಮ್ಲಜನಕ ಸಂಗ್ರಹಿಸಿ ಇಟ್ಟುಕೊಳ್ಳುವಷ್ಟು ಸಾಮರ್ಥ್ಯ ಆಸ್ಪತ್ರೆಗಳಲ್ಲಿ ಇಲ್ಲದಿರುವುದು ಮತ್ತೊಂದು ಕಾರಣ. ಹೀಗಾಗಿ ದಾಸ್ತಾನು ಖಾಲಿಯಾದರೆ ಟ್ಯಾಂಕರ್ ಬರುವವರೆಗೂ ಕಾಯಬೇಕಾದ ಅನಿವಾರ್ಯ ಸ್ಥಿತಿ ನಿರ್ವಣವಾಗಿದೆ.
ಆಸ್ಪತ್ರೆಗಳಿಗೆ ದರದ ಬರೆ ಕರೊನಾ ಸೋಂಕು ಸರ್ಕಾರಿ, ಖಾಸಗಿ ಎನ್ನದೆ ಆಸ್ಪತ್ರೆಗಳ ಆರ್ಥಿಕ ಸ್ಥಿತಿಯನ್ನು ಕುಗ್ಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳ ಚಿಕಿತ್ಸೆಗೆ ನಿರೀಕ್ಷೆಗೂ ಮೀರಿ ಆಮ್ಲಜನಕ ಸಂಗ್ರಹದ ಅಗತ್ಯವಿದೆ. ಆದರೆ ಪರಿಸ್ಥಿತಿಯನ್ನು ಲಾಭವನ್ನಾಗಿ ಮಾಡಿಕೊಳ್ಳಲು ಮುಂದಾಗಿರುವ ಕೆಲ ಕಂಪನಿಗಳು ಆಮ್ಲಜನಕ ಪೂರೈಕೆಗೆ ದುಪ್ಪಟ್ಟು ದರ ಕೇಳುತ್ತಿವೆ. ಈ ಮೊದಲು 21 ರೂ. ಗೆ ನೀಡುತ್ತಿದ್ದ (1 ಕ್ಯೂಬಿಕ್ ಮೀಟರ್) ಆಮ್ಲಜನಕಕ್ಕೆ ಈಗ 40 ರೂ. ಕೇಳುತ್ತಿದ್ದಾರೆ. ಹೆಚ್ಚುವರ ಹಣ ಕೇಳುತ್ತಿರುವ ಕಂಪನಿಗಳ ವಿರುದ್ಧ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಅಸೋಷಿಯೇಷನ್ (ಫಾನ)ದ ಅಧ್ಯಕ್ಷ ಡಾ. ಆರ್. ರವೀಂದ್ರ ತಿಳಿಸಿದ್ದಾರೆ.
ಆಮ್ಲಜನಕ ಪೂರೈಕೆ ಎಲ್ಲಿಂದ?
ರಾಜ್ಯಕ್ಕೆ ಶೇ. 50 ಆಮ್ಲಜನಕ ಬಳ್ಳಾರಿಯಿಂದ ಪೂರೈಕೆಯಾಗುತ್ತದೆ. ಕಬ್ಬಿಣವನ್ನು ತಯಾರು ಮಾಡುವಾಗ ಉಪ ಉತ್ಪನ್ನವಾಗಿ ಸಿಗುವ ಆಮ್ಲಜನಕವನ್ನು ಬಳ್ಳಾರಿಯ ಜಿಂದಾಲ್ ಕಾರ್ಖಾನೆ ಟ್ಯಾಂಕರ್ ಮೂಲಕ ರಾಜ್ಯದ ಎಲ್ಲ ಭಾಗಗಳಿಗೂ ಪೂರೈಸುತ್ತದೆ. ಅದನ್ನು ಸಿಲಿಂಡರ್ಗಳ ಮೂಲಕ ಸಂಗ್ರಹಿಸಿ, ಸ್ಥಳೀಯ ಸರಬರಾಜು ಏಜೆಂಟರು ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಾರೆ. ಉಳಿದಂತೆ ನೆರೆ ರಾಜ್ಯಗಳಿಂದ ಸರಬರಾಜಾಗುತ್ತಿದೆ. ಆತಂಕದ ವಿಚಾರವೆಂದರೆ ರಾಜ್ಯದ ಬಹುಪಾಲು ಆಸ್ಪತ್ರೆಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹಾಗೂ ವ್ಯವಸ್ಥೆ ಹೊಂದಿಲ್ಲ. ಕರೊನಾ ಪೂರ್ವದಲ್ಲಿ ಇದ್ದ ಅಗತ್ಯತೆಗೆ ಅನುಗುಣವಾಗಿ ಆಸ್ಪತ್ರೆಗಳು ಆಮ್ಲಜನಕದ ಸಂಗ್ರಹ ವ್ಯವಸ್ಥೆ ಮಾಡಿಕೊಂಡಿದ್ದು, ಈ ಪ್ರಮಾಣದಲ್ಲಿ ಬೇಡಿಕೆ ಹೆಚ್ಚುವ ಅಂದಾಜು ಇರಲಿಲ್ಲ. ಇಂತಹ ಪರಿಸ್ಥಿತಿ ನಿರ್ವಣವಾಗುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ.
ಮೈಸೂರಿಗೆ ನಿತ್ಯ 39 ಕಿ.ಲೀ ಬೇಕು
ಮೈಸೂರು ಜಿಲ್ಲೆಗೆ ನಿತ್ಯ 39 ಕಿಲೋ ಲೀಟರ್ ಆಮ್ಲಜನಕದ ಅಗತ್ಯವಿದೆ. ಜತೆಗೆ ಅಪಘಾತ ಪ್ರಕರಣಗಳಿಗೆ 12 ಕಿ.ಲೀ. ಹಾಗೂ ಮೈಸೂರಿನಿಂದ ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ 3.2 ಕಿ. ಲೀ. ಆಮ್ಲಜನಕದ ಅಗತ್ಯವಿದೆ. ಇದೆಲ್ಲವೂ ಸೇರಿ ಒಟ್ಟು 54.2 ಕಿ.ಲೀ. ಆಮ್ಲಜನಕ ಪ್ರತಿದಿನ ಪೂರೈಕೆಯಾಗಬೇಕಿದೆ. ಆದರೆ ಪೂರೈಕೆಯಾಗುತ್ತಿರುವ ಆಮ್ಲಜನಕದ ಪ್ರಮಾಣ 22 ಕಿಲೋ ಲೀಟರ್ ಮಾತ್ರ! ಅಂದರೆ 32.2 ಕಿ.ಲೀ. ಆಮ್ಲಜನಕ ಪ್ರತಿದಿನ ಕೊರತೆಯಾಗುತ್ತಿದೆ. ಕೆ.ಆರ್. ಆಸ್ಪತ್ರೆಯೊಂದಕ್ಕೆ ಪ್ರತಿದಿನ ಕನಿಷ್ಠ 6 ಕಿ.ಲೀ. ಆಮ್ಲಜನಕದ ಅಗತ್ಯವಿದೆ. ಈ ಆಸ್ಪತ್ರೆಗಿಂತಲೂ ಹೆಚ್ಚಿನ ಪ್ರಮಾಣದ ಕರೊನಾ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ಅರ್ಧದಷ್ಟು ಆಮ್ಲಜನಕ ಪೂರೈಕೆ ಮಾಡುವುದೂ ಕಷ್ಟದ ಕೆಲಸವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡು, ಕೈಗಾರಿಕೆಗಳಿಗೆ ಆಮ್ಲಜನಕ ಸರಬರಾಜು ಮಾಡಬಾರದು ಎಂದು ಜಿಲ್ಲಾಧಿಕಾರಿ ಶರತ್ ಆದೇಶ ಹೊರಡಿಸಿದ್ದಾರೆ.