

ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ದಾಖಲಾಗಿರುವ ರೋಗಿಗಳಿಗೆ ಶನಿವಾರ ಬೆಳಗ್ಗೆ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕೆಲಕಾಲ ಆತಂಕ ನಿರ್ವಣವಾಗಿತ್ತು. ಆಕ್ಸಿಜನ್ ಪೂರೈಸುವ ಘಟಕದಲ್ಲಿ ಸೋರಿಕೆ ಕಂಡು ಬಂದಿದ್ದರಿಂದ ಈ ಸಮಸ್ಯೆ ಉದ್ಭವಿಸಿತ್ತು.
ಆಸ್ಪತ್ರೆ ಪಕ್ಕದಲ್ಲಿ ಆಕ್ಸಿಜನ್ ಸಂಗ್ರಹಾಗಾರವಿದ್ದು, ಇಲ್ಲಿಂದ ಪೈಪ್ಲೈನ್ ಮೂಲಕ ವಾರ್ಡ್ಗೆ ಆಕ್ಸಿಜನ್ ಪೂರೈಕೆ ಆಗುತ್ತಿದೆ. ನಸುಕಿನ ಜಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಆಗದಿದ್ದಾಗ, ಘಟಕದಲ್ಲಿ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಒಟ್ಟು 18 ಸೋಂಕಿತರನ್ನು ಮಾತ್ರ ಆಸ್ಪತ್ರೆಯಲ್ಲಿಡಲಾಗಿದೆ. 7 ಮಂದಿಯನ್ನು ಹೊರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. (ಸಿದ್ದಾಪುರ 4, ಯಲ್ಲಾಪುರ 1, ಮುಂಡಗೋಡ 2) ಮೂರು ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸದ್ಯ ಆಕ್ಸಿಜನ್ ಪೂರೈಕೆಗೆ ಸಮಸ್ಯೆ ಇಲ್ಲವೆಂದು ಆಸ್ಪತ್ರೆ ಸ್ಪಷ್ಟ ಪಡಿಸಿದೆ.
ಸ್ಥಳಕ್ಕೆ ತಂತ್ರಜ್ಞರನ್ನು ಕರೆಸಲಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ಡಿಎಸ್ಪಿ ರವಿ ನಾಯ್ಕ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಪಿಎಸ್ಐ ರಾಜಕುಮಾರ ಭೇಟಿ ನೀಡಿ ಪರಿಶೀಲಿಸಿದರು.