

ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯ ದೊಡ್ಡಹಳ್ಳಿ ಕೊಪ್ಪಲಿನ ಸಂತೆ ಮೈದಾನದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕವನ್ನು ರಾತ್ರೋರಾತ್ರಿ ಗ್ರಾಮದ ಜೈ ಭೀಮ್ ಯುವಕರ ಸಂಘ ಅಳವಡಿಸಿದ್ದು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಕುರುಬ, ಮಡಿವಾಳ, ಮುಸ್ಲಿಂ, ಮರಾಠಿ, ಪರಿಶಿಷ್ಟ ಜಾತಿ ವರ್ಗದ ಸಮುದಾಯದವರು ನೂರಾರು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಜಾತೀಯತೆಯ ಮೇಲಾಟದ ನಾಮಫಲಕಗಳಿಂದ ಶಾಂತಿಭಂಗ ಉಂಟಾಗುತ್ತಿದೆ ಎಂದು ಗ್ರಾಮದ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಬಾರೆ ಸಂತೆ ಎಂದು ಹೆಸರುವಾಸಿಯಾಗಿರುವ ಗುರುವಾರದ ಸಂತೆ ಈ ಪ್ರಕರಣದಿಂದ ಸ್ಥಗಿತವಾಗಿತ್ತು. ಸಂತೆಗೆ ಬಂದ ವ್ಯಾಪಾರಸ್ಥರು, ಗ್ರಾಹಕರು ಸಂತೆ ಸ್ಥಗಿತವಾಗಿರುವುದನ್ನು ತಿಳಿದು ವಾಪಸ್ ಮರಳಿದರು.
ತಹಸೀಲ್ದಾರ್ ಭೇಟಿ: ಪ್ರಕರಣದ ಗಂಭೀರತೆಯನ್ನು ಅರಿತು ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ತಹಸೀಲ್ದಾರ್ ರೇಣುಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು. ಡಿವೈಎಸ್ಪಿ ಶಾಲೂ, ತಾಪಂ ಇಒ ಮುನಿರಾಜು, ಸಿಪಿಐ ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಕುಮಾರ್ ಅವರು ತಂಡದಲ್ಲಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರನ್ನು ಸಭೆ ಸೇರಿಸಿ ಘಟನೆಯ ಪೂರ್ವಪರ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದರು. ಗ್ರಾಮಸ್ಥರು ಶಾಂತಿ ಕಾಪಾಡಿಕೊಳ್ಳುವಂತೆ ಮನವೊಲಿಸಿದ್ದಾರೆ. ಯಾವುದೇ ಜಾತಿ ಸಂಘರ್ಷಕ್ಕೆ ಅವಕಾಶ ನೀಡಬಾರದೆಂದು ತಿಳಿ ಹೇಳಿದರು.
ತೆರವಿಗೆ ಜೂ.5ರವರೆಗೆ ಗಡುವು: ದೊಡ್ಡಹಳ್ಳಿ ಕೊಪ್ಪಲಿನ ಬಾರೆ ಸಂತೆ ಸ್ಥಳಕ್ಕೆ ಭೇಟಿ ನೀಡಿ ಜೈ ಭೀಮ್ ಯುವಕರ ಸಂಘ ಅಳವಡಿಸಿರುವ ನಾಮಫಲಕವನ್ನು ಪರಿಶೀಲಿಸಿದ್ದೇನೆ. ತೆರವಿಗೆ ಜೂನ್ 5ರವರೆಗೆ ಗಡುವು ನೀಡಲಾಗಿದ್ದು, ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ತಿಳಿಸಿದ್ದೇನೆ. ಸರ್ವೇ ನಂಬರ್ 93ರ ಸಂಪೂರ್ಣ ಜಾಗವನ್ನು ಸರ್ವೇ ಮಾಡಲಾಗುವುದು. ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಳವನ್ನು ಕಾಯ್ದಿರಿಸಿ ಉಳಿದ ಜಾಗವನ್ನು ಯಾವ ಉದ್ದೇಶಕ್ಕಾಗಿ ಬಳಸಬೇಕೆಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಗ್ರಾಮ ಎಲ್ಲ ವರ್ಗದ ಜನರು ಶಾಂತಿಯಾಗಿ ಇರುವಂತೆ ಕೋರಿದ್ದೇನೆ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ತಿಳಿಸಿದರು.
ಸಾರ್ವಜನಿಕ ಜಾಗದಲ್ಲಿ ನಾಮಫಲಕ ನೆಟ್ಟಿರುವುದು ಸರಿಯಾದ ಕ್ರಮವಲ್ಲ ಅದನ್ನು ತೆರವುಗೊಳಿಸಬೇಕು ಎಂದು ಕೆಲವರು ಆಗ್ರಹಿಸಿದರೆ, ಯಾವುದೇ ಕಾರಣಕ್ಕೂ ನಾವು ತೆರವುಗೊಳಿಸುವುದಿಲ್ಲ ಎಂದು ಕೆಲವು ಯುವಕರು ಹಠ ಹಿಡಿದಿದ್ದಾರೆ. ಈ ಬೆಳವಣಿಗೆ ಗೊಂದಲಕ್ಕೆ ಕಾರಣವಾಗಿದೆ. ಯಾವ ವರ್ಗದ ಜನ ಎಲ್ಲಿ ವಾಸಿಸುತ್ತಾರೋ ಅಲ್ಲೇ ನಾಮಫಲಕ ನೆಟ್ಟು ಆರಾಧಿಸಲಿ, ಅವರು ವಾಸ ಇಲ್ಲದಿರುವ ಸ್ಥಳಕ್ಕೆ ಬಂದು ನಾಮ ಫಲಕ ನೆಟ್ಟು ನೆಮ್ಮದಿ ಹಾಳು ಮಾಡುತ್ತಿರುವುದು ನೋವು ತರಿಸಿದೆ ಎಂದು ಅಲ್ಲಿಯ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ನಾಮಫಲಕ ಅಳವಡಿಕೆ ವಿಚಾರ ಯಾವ ಸ್ವರೂಪ ಪಡೆದುಕೊಳ್ಳುವುದು ಎಂಬುದು ಗ್ರಾಮದ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುನ್ನೆಚ್ಚರಿಕೆಯಿಂದ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಹದೇವ್ ಹಾಗೂ ಗ್ರಾಮದ ಮುಖಂಡರು ಇದ್ದರು.