

ಕೋಣನೂರು ಲೋಕೇಶ್ ನಂಜನಗೂಡು
ತಾಲೂಕಿನ ಕೂಡ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸನಾಳು ಗ್ರಾಮದಲ್ಲಿರುವ ನೀರು ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿದೆ. ಟ್ಯಾಂಕನ್ನು ತೆರವುಗೊಳಿಸಿ, ಹೊಸ ಟ್ಯಾಂಕ್ ನಿರ್ಮಿಸಿ ಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
28 ವರ್ಷಗಳ ಹಿಂದೆ ಓವರ್ ಹೆಡ್ ಟ್ಯಾಂಕ್‌ನ್ನು ನಿರ್ಮಾಣ ಮಾಡಲಾಗಿದೆ. ಇದು ಐವತ್ತು ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಗ್ರಾಮದ ಸುಮಾರು 300ಕ್ಕೂ ಹೆಚ್ಚು ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಪಿಲ್ಲರ್, ಟ್ಯಾಂಕ್ ಹಾಗೂ ಕಂಬಗಳಲ್ಲಿ ಸಿಮೆಂಟ್ ಕಿತ್ತು ಬಂದಿದ್ದು, ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಪ್ರತಿದಿನ ಗ್ರಾಮಸ್ಥರು, ರೈತರು ಹಾಗೂ ಶಾಲಾ ಮಕ್ಕಳು ತಿರುಗಾಡುವ ರಸ್ತೆ ಮಧ್ಯೆ ಇರುವುದರಿಂದ ಇನ್ನಷ್ಟು ಅಪಾಯಕಾರಿಯಾಗಿದೆ.
ಶಿಥಿಲಗೊಂಡಿದ್ದರೂ ನೀರಿನ ಶೇಖರಣೆ: ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಒಟ್ಟು ಎರಡು ಓವರ್ ಹೆಡ್ ಟ್ಯಾಂಕ್‌ಗಳಿವೆ. ಒಂದು ಟ್ಯಾಂಕ್ ಉತ್ತಮವಾಗಿದೆ. ಪ್ರಸ್ತುತ ಶಿಥಿಲಗೊಂಡಿರುವ ಟ್ಯಾಂಕ್‌ಗೆ ನೀರು ತುಂಬಿಸಲಾಗುತ್ತಿದೆ. ಹೊರ ಭಾಗದಲ್ಲಿ ಸಿಮೆಂಟ್ ಚಕ್ಕೆಗಳು ಕಿತ್ತು ಬಂದಿರುವುದು ಕಾಣಿಸುತ್ತಿದೆ. ಕೆಲವು ಸಮಯಗಳಲ್ಲಿ ಪ್ಯಾಚ್‌ವರ್ಕ್ ಕೂಡ ಮಾಡಲಾಗಿದೆ. ಆದರೆ, ಒಳಭಾಗದಲ್ಲಿ ಚಕ್ಕೆಗಳು ಉದುರಿ ಬೀಳುತ್ತಿದ್ದು, ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಅಪಾಯದ ಸ್ಥಿತಿಯಲ್ಲಿದೆ ಎಂದು ಗ್ರಾಮದ ರೈತ ಮುಖಂಡ ಮಹೇಶ್ ಆರೋಪಿಸಿದ್ದಾರೆ.
ತೆರವುಗೊಳಿಸಲು ಒತ್ತಾಯ: ರಸ್ತೆಯ ಮಧ್ಯ ಭಾಗದಲ್ಲಿ ಟ್ಯಾಂಕ್ ಇರುವ ಕಾರಣ, ದಿನನಿತ್ಯ ಶಾಲಾ ಮಕ್ಕಳು, ಬೈಕ್ ಸವಾರರು, ಜಮೀನಿಗೆ ತೆರಳುವ ರೈತರು ಇದೇ ಮಾರ್ಗದಲ್ಲಿ ತೆರಳುತ್ತಾರೆ. ಜತೆಗೆ ಅಪಾಯದ ಅರಿವಿದ್ದರೂ ಮಕ್ಕಳು ಇಲ್ಲೇ ಆಟವಾಡುತ್ತಿದ್ದಾರೆ. ಸಂಜೆ ಸಮಯದಲ್ಲಿ ಕೆಲವರು ಇದೇ ಟ್ಯಾಂಕ್ ಕೆಳಗೆ ಕುಳಿತುಕೊಳ್ಳುತ್ತಿದ್ದಾರೆ. ಅಪಾಯ ಸಂಭವಿಸುವ ಮುನ್ನ ಟ್ಯಾಂಕ್ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ನೀರಿನ ಸಮಸ್ಯೆ: ಗ್ರಾಮದಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಯಿಂದ ನೀರು ಸರಬರಾಜು ಆಗುತ್ತಿಲ್ಲ. ಹಬ್ಬ ಹರಿದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿರುತ್ತದೆ. ವಾರದಲ್ಲಿ ಎರಡು ಬಾರಿ ಒಂದು ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ ಎಂದು ಟೈಲರ್ ಸಿದ್ದರಾಜು ಆರೋಪಿಸಿದ್ದಾರೆ.
ಗ್ರಾಪಂ ಅಧಿಕಾರಿಗಳ ನಿರ್ಲಕ್ಷೃ: ಅಪಾಯದ ಹಂತದಲ್ಲಿದ್ದರೂ, ಈ ಬಗ್ಗೆ ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ಮೌಖಿಕವಾಗಿ ತಿಳಿಸಿದರು ಕೂಡ ಈ ಟ್ಯಾಂಕ್ ಸುರಕ್ಷಿತವಾಗಿದೆ ಎನ್ನುತ್ತಾರೆ. ಜತೆಗೆ ನಮ್ಮ ಇಲಾಖೆ ವ್ಯಾಪ್ತಿಗೆ ಟ್ಯಾಂಕ್ ಒಳಪಡುವುದಿಲ್ಲ ಎಂಬ ಮಾತುಗಳನ್ನು ಆಡುತ್ತಾರೆ. ಒಂದು ವೇಳೆ ಶಿಥಿಲಗೊಂಡಿರುವ ಈ ಟ್ಯಾಂಕ್‌ನಿಂದ ಅಪಾಯ ಸಂಭವಿಸಿದರೆ ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾ.ಪಂ. ಅಧಿಕಾರಿಗಳೇ ನೇರಹೊಣೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಬಹುಗ್ರಾಮ ನೀರಿನ ಟ್ಯಾಂಕ್ ಸ್ಥಿತಿಯೂ ಹೀಗೆ
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಟ್ಯಾಂಕ್ ಒಂದನ್ನು ಕಳಪೆಯಾಗಿ ನಿರ್ಮಿಸಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು. ಸರ್ಕಾರದ ಲಕ್ಷಾಂತರ ರೂ. ಪೋಲು ಮಾಡಿ, ಕಳಪೆ ಕಾಮಗಾರಿ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.