ಬೆಳೆದಿವೆ ಗಿಡಗಂಟಿ, ಸವಾರರಿಗೆ ಅಪಾಯ ಗ್ಯಾರಂಟಿ

20sdp1-tree
Published on

ರಮೇಶ ಹಾರ್ಸಿಮನೆ ಸಿದ್ದಾಪುರ

ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಸಿದ್ದಾಪುರ- ಕುಮಟಾ ರಾಜ್ಯ ಹೆದ್ದಾರಿಯ ಪಕ್ಕ ನೂರಾರು ಮರಗಳು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಜೀವಹಾನಿ ಸಂಭವಿಸುವ ಮುನ್ನ ಅವುಗಳನ್ನು ತೆರವುಗೊಳಿಸುವ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ.

ಘಟ್ಟದ ಮೇಲಿನ ಹಾಗೂ ಘಟ್ಟದ ಕೆಳಗಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸಿದ್ದಾಪುರ - ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಈಗ ವಾಹನಗಳ ಸಂಚಾರ ಹೆಚ್ಚಾಗಿದೆ. ಕಾರಣ ಶಿರಸಿ- ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಕುಮಟಾಕ್ಕೆ ತೆರಳುವ ಹಾಗೂ ಕುಮಟಾದಿಂದ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ.

ಈ ರಸ್ತೆಯ ಹಲವೆಡೆ ಮಳೆಗಾಲದಲ್ಲಿ ಬಿದ್ದ ಮರಗಳನ್ನು ಸಂಚಾರಕ್ಕೆ ಬೇಕಾಗುವಷ್ಟೇ ತೆರವುಗೊಳಿಸಿ ರಸ್ತೆಗೆ ತಾಗಿಯೇ ಬಿಟ್ಟಿದ್ದಲ್ಲದೆ ಚರಂಡಿಗಳಿಗೆ ಅಡ್ಡವಾಗಿಯೂ ಇವೆ. ಹಲವೆಡೆ ವಾಹನಗಳ ಛಾವಣಿಗೆ ಮರದ ದಿಮ್ಮಿಗಳು ತಾಗುವಂತಿವೆ. ಮತ್ತೆ ಕೆಲ ಕಡೆ ಈಗಲೋ ಆಗಲೋ ಬೀಳುವ ಮರಗಳು ಒಣಗಿ ನಿಂತಿವೆ.

ರಸ್ತೆ ಪಕ್ಕದ ಚರಂಡಿಗಳಲ್ಲಿ ಮರದು ತುಂಡುಗಳು ಬಿದ್ದಿರುವುದರಿಂದ ಒಂದು ಮಳೆ ಬಂದರೂ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯ ಮೇಲೆ ಹರಿಯುತ್ತದೆ. ಇನ್ನು ಮರದ ತುಂಡುಗಳು ರಸ್ತೆಗೆ ತಾಗಿಯೇ ಇರುವುದರಿಂದ ವಾಹನ ಸವಾರರಿಗೆ ಕಂಟಕಪ್ರಾಯವಾಗಿವೆ.

ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯಷ್ಟೆ ಅರಣ್ಯ ಇಲಾಖೆಯ ಜವಾಬ್ದಾರಿಯೂ ಇದೆ. ರಸ್ತೆ ಪಕ್ಕದಲ್ಲಿರುವ ಮರದ ತುಂಡುಗಳನ್ನು ತೆರವುಗೊಳಿಸುವ ಜತೆಗೆ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅಪಾಯದಲ್ಲಿರುವ ಮರಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯ ತುರ್ತಾಗಿ ಮಾಡಬೇಕಾಗಿದೆ.

 ಶಾಸಕರ ಸೂಚನೆಗಿಲ್ಲ ಕಿಮ್ಮತ್ತು! : ಕಳೆದ ಮಳೆಗಾಲದಲ್ಲಿಯೇ ಶಾಸಕ ಭೀಮಣ್ಣ ನಾಯ್ಕ ಅವರು ಸಿದ್ದಾಪುರದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಸಂಚಾರಕ್ಕೆ ತೊಂದರೆ ಆಗುವಂತಹ ಸ್ಥಳದಲ್ಲಿ ಮರಗಳಿದ್ದರೆ ಅವುಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿದ್ದಾಪುರ- ಕುಮಟಾ ರಸ್ತೆಯ ಬೀರ್ಲಮಕ್ಕಿಯಿಂದ ಬಡಾಳವರೆಗಿನ ಹಲವೆಡೆ ರಸ್ತೆಯ ಪಕ್ಕ ಹಾಗೂ ರಸ್ತೆಗೆ ಅಡ್ಡವಾಗಿ ಅಪಾಯಕಾರಿಯಾದ ಮರಗಳಿವೆ. ಅವುಗಳನ್ನು ತೆರವುಗೊಳಿಸಿ ಮುಂದಾಗಬಹುದಾದ ಅಪಾಯ ತಪ್ಪಿಸಲು ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಅದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದುನಿಂತ ಗಿಡಗಂಟೆಗಳನ್ನು ಹಾಗೂ ಅಲ್ಲಲ್ಲಿ ಧರೆ ಕುಸಿದು ರಸ್ತೆಗೆ ಬಂದಿರುವ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.  | ವೆಂಕಟರಮಣ ನಾಯ್ಕ, ವಾಹನ ಚಾಲಕ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net