

| ಹರೀಶ್ ಬೇಲೂರು ಬೆಂಗಳೂರು
ಬಿಬಿಎಂಪಿಗೆ ಪ್ರತಿವರ್ಷ ಸಾವಿರಾರು ಕೋಟಿ ರೂ. ಅನುದಾನ ಬರುತ್ತಿದ್ದರೂ ಅಭಿವೃದ್ಧಿ ಹೆಸರಿನಲ್ಲಿ ದುಂದುವೆಚ್ಚ ನಡೆಯುತ್ತಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ಪಾಲಿಕೆ ವಿಫಲವಾಗಿದ್ದು, ದುರಸ್ತಿ, ಹೊಸ ಕಾಮಗಾರಿ, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವ್ಯಯಿಸಿರುವುದನ್ನು ರಾಜ್ಯ ಲೆಕ್ಕ ಪರಿಶೋಧನ ಇಲಾಖೆ ವರದಿಯಲ್ಲಿ ಬಹಿರಂಗವಾಗಿದೆ.
ಕ್ರಿಯಾಯೋಜನೆಗೆ ಹಣ ಖರ್ಚು ಮಾಡದೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಕೆಲ ಕಾಮಗಾರಿಗಳಿಗೆ ಕಾನೂನá-ಬಾಹಿರವಾಗಿ ಅಧಿಕ ಮೊತ್ತದ ಬಿಲ್ ಪಾವತಿಸಲಾಗಿದೆ. ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವಾಗಿದೆ. ಪಾಲಿಕೆಗೆ ಬರುವ ರಾಜಸ್ವವನ್ನು ಸಮರ್ಪಕವಾಗಿ ಲೆಕ್ಕ ಹಾಕುತ್ತಿಲ್ಲ ಹಾಗೂ ಪಾಲಿಕೆಗೆ ಸಂದಾಯ ಮಾಡದಿರುವುದು ಕೂಡ ಬೆಳಕಿಗೆ ಬಂದಿದೆ.
ಬಿಬಿಎಂಪಿ ಲೆಕ್ಕಪತ್ರಗಳ ನಿರ್ವಹಣೆ ಕ್ರಮಬದ್ಧವಾಗಿ ನಿರ್ವಹಿಸಬೇಕು. ಪಾಲಿಕೆಗೆ ಬರಬೇಕಾದ ಕರಗಳು, ಶುಲ್ಕಗಳು, ಇತರೆ ಆದಾಯವನ್ನು ನಿಯಮಬದ್ಧವಾಗಿ ವಸೂಲಿ ಮಾಡಲಾಗುತ್ತಿಲ್ಲ, ಪಾಲಿಕೆಗೂ ಜಮಾ ಮಾಡುತ್ತಿಲ್ಲ. ಬಿಬಿಎಂಪಿಯಲ್ಲಿ ಆಡಳಿತ ಕಚೇರಿಗಳು, ನಗರ ಯೋಜನೆ ಕಚೇರಿಗಳು, ತೋಟಗಾರಿಕೆ, ಅರಣ್ಯ, ಕಲ್ಯಾಣ ಹಾಗೂ ಪಶು ಸಂಗೋಪನೆ ಕಚೇರಿ ಸೇರಿದಂತೆ ಒಟ್ಟು 71 ಕಚೇರಿಗಳಿವೆ. ಶಿಕ್ಷಣ ಇಲಾಖೆ ವ್ಯಾಪಿಯಲ್ಲಿ 68, ಕಂದಾಯ ಇಲಾಖೆ ವ್ಯಾಪಿಯಲ್ಲಿ 93, ಆರೋಗ್ಯ ಇಲಾಖೆಯಲ್ಲಿ 122 ಹಾಗೂ ಕಾಮಗಾರಿ ಇಲಾಖೆಯಲ್ಲಿ 151 ಸೇರಿ ಒಟ್ಟು 505 ವಿವಿಧ ಕಚೇರಿಗಳಿವೆ. ಈ ಎಲ್ಲ ಕಚೇರಿಗಳಲ್ಲಿ ಆರ್ಥಿಕ ಶಿಸ್ತು ಪಾಲನೆಯಾಗುತ್ತಿಲ್ಲ.
1964-65ರಿಂದ 2016-17ನೇ ಸಾಲಿನವರೆಗೆ ಲೆಕ್ಕಪರಿಶೋಧನಾ ವರದಿಗಳಲ್ಲಿ ಬಾಕಿ ಉಳಿದಿರುವ ಮೊತ್ತದ ವಸೂಲಾತಿಗೆ ಸೂಚಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿವರ್ಷ ಆಯವ್ಯಯದಲ್ಲಿ ವರಮಾನ ಮತ್ತು ವೆಚ್ಚಗಳ ಅಂದಾಜುಗಳಿಗೂ, ವಾಸ್ತವಿಕ ಲೆಕ್ಕ ಶೀರ್ಷಿಕೆಗಳಲ್ಲಿನ ವರಮಾನ ಮತ್ತು ವೆಚ್ಚಗಳಿಗೂ ಅಗಾಧ ವ್ಯತ್ಯಾಸ ಕಂಡುಬಂದಿದೆ. ಆಸ್ತಿ ತೆರಿಗೆ, ಜಾಹೀರಾತು ತೆರಿಗೆ, ಕಂದಾಯ ತೆರಿಗೆಯೇತರ ಸ್ವೀಕೃತಿಗಳು ಸೇರಿ ಇತರೆ ತೆರಿಗಳಲ್ಲಿ ಪರಿಷ್ಕೃತ ಆಯವ್ಯಯ ಮತ್ತು ವಾಸ್ತವಿಕ ಲೆಕ್ಕಗಳ ನಡುವೆ ಕೋಟ್ಯಂತರ ರೂ.ಗಳ ವ್ಯತ್ಯಾಸವಾಗಿದೆ.
ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಅಧಿಕಾರಿಗಳು ವಿಫಲವಾಗಿದ್ದಾರೆ. ಬಿಬಿಎಂಪಿ ಆರ್ಥಿಕ ವಿಭಾಗಕ್ಕೆ ವಿಶೇಷ ಆಯುಕ್ತರನ್ನು ನೇಮಿಸಿದ್ದರೂ ಪ್ರಯೋಜನವಾಗಿಲ್ಲ. ಬಜೆಟ್ನಲ್ಲಿ ಘೋಷಿಸಿರುವ ಯೋಜನೆಗಳು ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ.
| ಅಬ್ದುಲ್ ವಾಜಿದ್ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ
ಕ್ರಿಯಾಯೋಜನೆಗೆ ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗದವರ ಕಲ್ಯಾಣ ಕಾರ್ಯಕ್ರಮಗಳು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಆರ್ಥಿಕ ಸಹಾಯ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳು, ವಾರ್ಡ್ಗಳಿಗೆ ಹೊಲಿಗೆ ಯಂತ್ರ, ಸೈಕಲ್ ನೀಡಿಕೆ, ತರಬೇತಿ ಕೇಂದ್ರಗಳ ಗೌರವಧನ, ರಾತ್ರಿ ತಂಗುದಾಣಗಳ ನಿರ್ಮಾಣ ಮತ್ತು ನಿರ್ವಹಣೆ (ವಲಯವಾರು), ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮನೆಗಳ ನಿರ್ಮಾಣ ಇತ್ಯಾದಿ ಯೋಜನೆಗಳಿಗೆ ಕ್ರಿಯಾಯೋಜನೆ ಮಾಡಿಕೊಂಡ ಮೊತ್ತಗಳನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡದೆ ಅಂದಾಜು ಪ್ರತಿವರ್ಷ 200- 250 ಕೋಟಿ ರೂ. ಉಳಿಸಿಕೊಳ್ಳಲಾಗುತ್ತಿದೆ.