

ಬೆಂಗಳೂರು: ನಗರದಲ್ಲಿ ಜೂ 1ರಿಂದ ಜೂ 14ರವರೆಗೆ ಅನಧಿಕೃತವಾಗಿ ಅಳವಡಿಸಿರುವ 3,800ಕ್ಕೂ ಅಧಿಕ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿರುವ ಬಿಬಿಎಂಪಿ,75 ಸಾವಿರ ರೂ.ದಂಡ ಹಾಕಿದೆ.ವಿವಿಧ ಪೊಲೀಸ್ ಠಾಣೆಗಳಲ್ಲಿ 76 ದೂರುಗಳು ಸ್ವೀಕೃತವಾಗಿದ್ದು, 48 ಎಫ್ಐಆರ್ ದಾಖಲಾಗಿದೆ.
ನಗರದ ರಸ್ತೆಗಳ ಬದಿ, ಪಾದಚಾರಿ ಮಾರ್ಗ, ಮೇಲ್ಸುತುವೆ ಸೇರಿ ಇತರೆ ಕಡೆ ಅನಧಿಕೃತವಾಗಿ ಸಾರ್ವಜನಿಕ, ವೈಯಕ್ತಿಕ, ಶುಭಾಶಯಗಳು ಹಾಗೂ ಸಭೆ ಸಮಾರಂಭಗಳು ಕುರಿತು ಫ್ಲೆಕ್ಸ್, ಬ್ಯಾನರ್, ಎಲ್ಇಡಿ, ಹೋರ್ಡಿಂಗ್ಸ್, ಭಿತ್ತಿಪತ್ರ, ಬಾವುಟ ಅಳವಡಿಸಲಾಗುತ್ತಿದೆ. ಇವುಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದ್ದು, ಪರಿಸರಕ್ಕೆ ಮಾರಕವಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿ ಅನ್ವಯ ವಸತಿ ಪ್ರದೇಶ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕ ಅಳವಡಿಸುವುದು,ವಾಣಿಜ್ಯ ಜಾಹೀರಾತು ಹಾಗೂ ಎಲ್ಇಡಿ ಜಾಹೀರಾತು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಕುರಿತು ನಾಗರಿಕರು ಪಾಲಿಕೆ ಸಹಾಯವಾಣಿ 1533 ಅಥವಾ ಜಾಹೀರಾತು ವಿಭಾಗದ ವ್ಯಾಟ್ಸಾಪ್ 9480683939ಕ್ಕೆ ಛಾಯಾಚಿತ್ರ, ವೀಡಿಯೋ ಮಾಡಿ ವಿಳಾಸ ಸಮೇತ ಕಳುಹಿಸಿದರೆ ಪಾಲಿಕೆ ತೆರವು ಕ್ರಮ ಕೈಗೊಳ್ಳುತ್ತದೆ.