

ಶ್ರೀರಂಗಪಟ್ಟಣ: ಬರಗಾಲದ ನಡುವೆಯೂ ಕನ್ನಂಬಾಡಿ ಅಣೆಕಟ್ಟಿಯಿಂದ ತಮಿಳುನಾಡಿಗೆ ನೀರು ಹರಿಸಿದ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ ನಡೆ ಸರಿಯಲ್ಲ ಎಂದು ಆರೋಪಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಭಾನುವಾರ ಜಮಾವಣೆಗೊಂಡ ವೇದಿಕೆ ಕಾರ್ಯಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ ವಿರುದ್ಧ ಅರಬೆತ್ತಲಾಗಿ ಸಾಲು ಸಾಲು ಘೋಷಣೆ ಕೂಗುವ ಆಕ್ರೋಶ ವ್ಯಕ್ತಪಡಿಸಿದರು.
ಸುಡು ಬಿಸಿಲನ್ನೂ ಲೆಕ್ಕಿಸದೆ ಹೆದ್ದಾರಿಯಲ್ಲಿ ಬರಿ ಮೈಯಲ್ಲಿ ಉರುಳುಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೆಲ ತಾಸು ಖಾಲಿ ಕೊಡಗಳನ್ನು ಹಿಡಿದು ಹೆದ್ದಾರಿಯಲ್ಲಿ ಸಂಚಾರ ಅಡ್ಡಗಟ್ಟಿ ಧರಣಿ ನಡೆಸಿದರು.
ಮರವೇ ಸಂಸ್ಥಾಪಕ ಅಧ್ಯಕ್ಷ ಶಂಕರ್‌ಬಾಬು ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕ ಹಾಗೂ ಕನ್ನಡಿಗರನ್ನು ಕಡೆಗಣಿಸಿ ತಮ್ಮ ರಾಜಕೀಯ ದುರುದ್ದೇಶಕ್ಕೆ ತಮಿಳುನಾಡು ರಾಜ್ಯದ ಪರ ನಿಂತಿದೆ. ರಾಜ್ಯದ ರೈತರಿಗೆ ಕೃಷಿಗೆ ನೀರಿಲ್ಲದಂತಾಗಿದೆ. ಅಲ್ಲದೆ ಜನ-ಜಾನುವಾರುಗಳಿಗೂ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇಂತಹ ಭೀಕರ ಬರಗಾಲದ ನಡೆವೆಯೂ ಕನ್ನಂಬಾಡಿ ಅಣೆಕಟ್ಟೆಯಿಂದ ತಮಿಳುನಾಡು ರಾಜ್ಯಕ್ಕೆ 4ಸಾವಿರ ಕ್ಯೂಸೆಕ್ ನೀರು ಹರಿಸಿ ಕನ್ನಡಿಗರ ಮರಣ ಶಾಸನ ಬರೆದಿದೆ. ಇದಕ್ಕೆ ಜಲಸಂಪನ್ಮೂಲ ಸಚಿವವೇ ನೇರ ಹೊಣೆಯಾಗಿದ್ದು, ತಕ್ಷಣ ನೀರು ಹರಿಯುವುದನ್ನು ಸ್ಥಗಿತಗೊಳಿಸದಿದ್ದಲ್ಲಿ ಕನ್ನಡಿಗರು ಸ್ವಾಭಿಮಾನದಿಂದ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಬೇಕು ಹಾಗೂ ರಾಜಕಾರಣಿಗಳಿಗೆ ಛೀಮಾರಿ ಹಾಕಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ವೇದಿಕೆ ಪದಾಧಿಕಾರಿಗಳಾದ ಜಗದೀಶ್,ಅಂಕಶೆಟ್ಟಿ, ಪ್ರಮೋದ್, ಶಂಕರೇಗೌಡ, ಚಿದಂಬರ ,ಕಿರಂಗೂರು ರವಿ,ಧನುಷ್, ಛಾಯದೇವಿ,ಭಾಗ್ಯಬಾಯಿ, ವಸಂತಮ್ಮ, ಗೌರಮ್ಮ ಇತರರು ಇದ್ದರು.