

ವಿಜಯವಾಣಿ ಸುದ್ದಿಜಾಲ ಹೆಬ್ರಿ ರಾಷ್ಟ್ರೀಯ ಹೆದ್ದಾರಿ 169ಎ ಹೆಬ್ರಿ ಕೆಳಪೇಟೆಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಬೃಹತ್ ಗುಂಡಿಗಳನ್ನು ಮುಚ್ಚದ ಹಿನ್ನೆಲೆಯಲ್ಲಿ ಸ್ಥಳೀಯರು ಗುರುವಾರ ರಾತ್ರಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ವಿಜಯವಾಣಿ ಪತ್ರಿಕೆ ವರದಿ ಪ್ರಕಟಿಸಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಸಮಸ್ಯೆಯಾಗುವುದನ್ನು ಗಮನಿಸಿದ ಸ್ಥಳೀಯ ಈ ವರ್ಷ ಬಾಳೆಗಿಡ ನೆಟ್ಟು ಆಕ್ರೋಶ ಹೊರಹಾಕಿದರು.
ರಾತ್ರಿ ನೆಟ್ಟ ಬಾಳೆ ಗಿಡಗಳನ್ನು ತೆರವುಗೊಳಿಸುವಂತೆ ಪೊಲೀಸರು ಸ್ಥಳೀಯರಿಗೆ ಸೂಚಿಸಿದರು. ಆದರೆ ಇದಕ್ಕೆ ಸ್ಥಳೀಯರು ಒಪ್ಪದ ಹಿನ್ನೆಲೆ ತಾವೇ ಸ್ವತಃ ತೆರವುಗೊಳಿಸಿದರು. ಪೊಲೀಸರ ಈ ಕ್ರಮವನ್ನು ಸ್ಥಳೀಯರು ವಿರೋಧಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ವಾನವೀಯ ದೃಷ್ಟಿಯಿಂದ ಗುಂಡಿಗಳನ್ನು ಮುಚ್ಚಿದರು. ಹೆಬ್ರಿ ಕೆಳಪೇಟೆಯಿಂದ ಚಾರದ ತನಕ ಇರುವ ಗುಂಡಿಗಳನ್ನು ಯಾವಾಗು ಮುಚ್ಚಿಸುತ್ತೀರಿ ಎಂದು ಸ್ಥಳೀಯರು ಪಿಡಬ್ಲ್ಯೂಡಿ ಇಲಾಖೆಯನ್ನು ಪ್ರಶ್ನಿಸಿದ್ದಾರೆ. ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರಸ್ತೆಯಲ್ಲಿ ನಿರ್ಮಾಣವಾಗಿರುವ ದೊಡ್ಡ ದೊಡ್ಡ ಗುಂಡಿಗಳಿಂದ ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ. ಪತ್ರಿಕೆಯಲ್ಲಿ ವರದಿ ಪ್ರಕಟವಾದರೂ ಸಂಬಂಧಪಟ್ಟವರು ಯಾವುದೇ ಕ್ರಮ ವಹಿಸಿಲ್ಲ. ರಸ್ತೆಯಲ್ಲಿ ಮರಣದ ಗುಂಡಿಗಳಿರುವುದರಿಂದ ದ್ವಿಚಕ್ರ ವಾಹನ ಸವಾರಿಗೆ ಸಂಚರಿಸುವುದೇ ಕಷ್ಟವಾಗಿದೆ. ಇದರಿಂದ ಬೇಸತ್ತು ಬಾಳೆಗಿಡ ನೆಟ್ಟಿದ್ದೇವೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು. -ಹರೀಶ್ ಶೆಟ್ಟಿ ನಾಡ್ಪಾಲು, ಸ್ಥಳೀಯ ಸದ್ಯಕ್ಕೆ ದುರಸ್ತಿಗೆ ನಮ್ಮಲ್ಲಿ ಅನುದಾನವಿಲ್ಲ. ವಾನವೀಯ ದೃಷ್ಟಿಯಲ್ಲಿ ತಾತ್ಕಾಕಲಿಕವಾಗಿ ದುರಸ್ತಿ ವಾಡಿಕೊಡಬೇಕು. ಆಗುಂಬೆಯಿಂದ ಹೆಬ್ರಿಯ ತನಕ ಇನ್ನೂ ಡಿಪಿಆರ್ ರಚನೆಯಾಗಿಲ್ಲ. ಸಾರ್ವಜನಿಕ ಹಿತದೃಷ್ಟಿಯಲ್ಲಿ ಕೆಲಸ ವಾಡುತ್ತೇವೆ. -ಮಂಜುನಾಥ್ ನಾಯ್ಕ, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ.