ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಅಜೆಕಾಯಿ ಸೇವೆ

gan (9)
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಬಯಲು ಆಲಯವೆಂದೇ ಪ್ರಸಿದ್ಧಿ ಪಡೆದಿರುವ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಆಟಿಯ ಹದಿನಾರನೇ ದಿನ ನಡೆಯುವ ಅಜೆಕಾಯಿ ಸೇವೆ ಶುಕ್ರವಾರ ನೆರವೇರಿತು. ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಸಂಪ್ರದಾಯದಂತೆ ಬೆಳಗ್ಗಿನ ವೇಳೆ ಇಲ್ಲಿನ ದೇವಕಾರ್ಯದವರೊಂದಿಗೆ ಬ್ರಾಹ್ಮಣ ಯುವಕರು ಸಮುದ್ರಕ್ಕೆ ತೆರಳಿ ಇಲ್ಲಿನ ಮೃತ್ತಿಕಾ ಪ್ರಸಾದವಾಗಿರುವ ಮರಳನ್ನು ಸಮುದ್ರದ ನೀರಿನಿಂದ ಆಯ್ದು ತಂದು ಬ್ರಹ್ಮಸ್ಥಾನದೊಳಗೆ ಹರಡಲಾಯಿತು. ಬೆಳಗ್ಗಿನಿಂದಲೇ ಅವಿಭಜಿತ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಭಕ್ತರು 15000ಕ್ಕೂ ಹೆಚ್ಚಿನ ತೆಂಗಿನಕಾಯಿ, ಸಹಸ್ರಾರು ಸೀಯಾಳ, ಫಲಪುಷ್ಪಗಳನ್ನು ಅರ್ಪಿಸಿದರು. ನಾಗದೇವರಿಗೆ ಸೀಯಾಳಾಭಿಷೇಕ, ಸನ್ನಿಧಾನಗಳ ಅಲಂಕಾರಗಳ ಬಳಿಕ ಬ್ರಹ್ಮಸ್ಥಾನದ ಸ್ಥಾನಿಗಳ, ಮಾನಿಗಳ ಸಮ್ಮುಖದಲ್ಲಿ ಊರವರೂ ಸೇರಿದಂತೆ ಭಕ್ತರ ಸಂಕಷ್ಟ ಹರಣ, ಇಷ್ಟಾರ್ಥ ಸಿದ್ಧಿ ಮತ್ತು ಲೋಕ ಕ್ಷೇಮಕ್ಕಾಗಿ ಪ್ರಾರ್ಥನೆ ನೆರವೇರಿತು. ಮಧ್ಯಾಹ್ನದ ವೇಳೆಗೆ ಅಜೆಕಾಯಿ ಕಲ್ಲಿಗೆ ಸನ್ನಿಧಾನದ ಪಾತ್ರಿಗಳಾದ ಹರಿನಾರಾಯಣ ರಾವ್ ಹಾಗೂ ಸುಬ್ರಹ್ಮಣ್ಯ ರಾವ್ ಅವರು ತೆಂಗಿನಕಾಯಿಗಳನ್ನು ಒಡೆದರು. ಬಳಿಕ ಅವುಗಳನ್ನು ಪ್ರಸಾದವಾಗಿ ವಿತರಿಸಲಾಯಿತು.

ಅರ್ಚಕರಾದ ಕೇಶವ ಆಚಾರ್ಯ, ರಘುಪತಿ ಆಚಾರ್ಯ, ಗುರುರಾಜ ಆಚಾರ್ಯ, ನಂದಕುಮಾರ್ ಆಚಾರ್ಯ, ಗುರಿಕಾರರಾದ ಪದ್ಮನಾಭ ಕೊರ್ನಾಯ, ಬಾಲಪ್ಪ ನಟರಾಜ ಪಿ. ಎಸ್., ಮುರುಡಿ ಜಗದೀಶ ರಾವ್, ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ಕೋಶಾಧಿಕಾರಿ ಸುರೇಶ್ ರಾವ್, ಟ್ರಸ್ಟಿಗಳಾದ ಶ್ರೀನಿವಾಸ ರಾವ್, ರಾಘವೇಂದ್ರ ರಾವ್, ರವೀಂದ್ರ ರಾವ್ ಪಿ.ಎಚ್., ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net