ಜಾತಿಗಣತಿ, ಜನಿವಾರ ಕಿತ್ತ ಪ್ರಕರಣಕ್ಕೆ ಆಕ್ರೋಶ; ಬ್ರಾಹ್ಮಣ ಮಹಾಸಂಘದಿಂದ ಪ್ರತಿಭಟನೆ ಎಚ್ಚರಿಕೆ

brahman
Published on

ಬೆಂಗಳೂರು: ಧಾರವಾಡ, ಶಿವಮೊಗ್ಗ, ಬೀದರ್ ಮತ್ತಿತರ ಕಡೆಗಳಲ್ಲಿ ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಕಿತ್ತು ಹಾಕಿದ ಪ್ರಕರಣ ಮತ್ತು ಅವೈಜ್ಞಾನಿಕ ಜಾತಿ ಗಣತಿ ವರದಿ ಮಂಡನೆಗೆ ಮುಂದಾಗಿರುವ ಸರ್ಕಾರದ ವಿರುದ್ಧ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಆರ್.ಪ್ರದೀಪ್, ಗಾಯಿತ್ರಿ ಮಂತ್ರದೀಕ್ಷೆ ಪಡೆದು ಆತ್ಮ ಸಾಕ್ಷಾತ್ಕಾರಕ್ಕಾಗಿ ಧರಿಸಿದ ಜನಿವಾರ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಯ ಸಂಕೇತವಾಗಿದ್ದು, ಇದನ್ನು ಕಿತ್ತು ಹಾಕಿರುವ ಅಧಿಕಾರಿಗಳ ಕ್ರಮ ಖಂಡನೀಯ. ಇಂತಹ ಕುಕೃತ್ಯಕ್ಕೆ ಸರ್ಕಾರದ ಆದೇಶ ನೀಡಿತ್ತಾ, ಮೇಲಾಧಿಕಾರಿಗಳ ಸೂಚನೆ ಇತ್ತಾ ಇದಕ್ಕೆ ಸರ್ಕಾರ ಉತ್ತರ ನೀಡಬೇಕು. ಕಷ್ಟಪಟ್ಟು ವರ್ಷಪೂರ್ತಿ ಓದಿ ಭವಿಷ್ಯವನ್ನು ನಿರ್ಣಯಿಸುವ ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಸ್ಥೈರ್ಯವನ್ನು ಕುಂದಿಸುವ ಘಟನೆ ನಡೆದಿದೆ. ಈಗ ಸಚಿವರು ನಮ್ಮ ಕಾಲೇಜಿನಲ್ಲಿ ಸೀಟು ಕೊಡುವುದಾಗಿ ಹೇಳಿದ್ದಾರೆ. ಅವರ ಕಾಲೇಜಿನಲ್ಲಿ ಸೀಟು ಕೊಡುವುದಲ್ಲ ವಿದ್ಯಾರ್ಥಿ ಕೇಳುವ ಕಾಲೇಜಿನಲ್ಲಿ ಸರ್ಕಾರ ಉಚಿತ ಸೀಟು ನೀಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕಳೆದ 10 ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯನ್ನು ಈಗ ಮಂಡಿಸಲು ಮುಂದಾಗಿರುವ ಸರ್ಕಾರದ ಕ್ರಮ ಕೂಡಾ ಅವೈಜ್ಞಾನಿಕವಾಗಿದೆ. ಸುಮಾರು 50 ಲಕ್ಷ ಇರುವ ಬ್ರಾಹ್ಮಣರನ್ನು 44 ಉಪ ಪಂಗಡದ ಹೆಸರಿನಲ್ಲಿ ಕೇವಲ 15 ಲಕ್ಷ ತೋರಿಸಲು ಹುನ್ನಾರ ನಡೆಸಿರುವ ಸರ್ಕಾರ ಕೂಡಲೇ ವರದಿಯನ್ನು ತಿರಸ್ಕರಿಸಬೇಕು. ಈ ಎರಡೂ ಪ್ರಕರಣಗಳನ್ನು ವಿರೋಧಿಸಿ 10 ಸಾವಿರ ವಿಪ್ರರು ಸೇರಿ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಘವೇಂದ್ರ ಅಲಗೂರ, ವಿಶ್ವನಾಥ ಜೋಶಿ, ನಂಜುಂಡಸ್ವಾಮಿ, ಪೂರ್ಣಿಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net