ತೈಲ ಬೆಲೆ ಹೆಚ್ಚಳಕ್ಕೆ ಹೊನ್ನಾವರದಲ್ಲಿ ಆಕ್ರೋಶ

20hnr1- proest
Published on

ಹೊನ್ನಾವರ: ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.


ಪಟ್ಟಣದ ಶರಾವತಿ ವೃತ್ತದಲ್ಲಿ ಸೇರಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಖಾಲಿ ಚೊಂಬು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮುಖ್ಯಮಂತ್ರಿ ಸಿದ್ದ್ಧಾಮಯ್ಯ ಅವರ ಪ್ರತಿಕೃತಿ ದಹಿಸಿ, ಅಣಕು ಶವಯಾತ್ರೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ಮಧ್ಯೆ ಪ್ರತಿಕೃತಿಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆಯಲು ಮುಂದಾದರು. ಈ ಸಂದರ್ಭದಲ್ಲಿ ಪಿಎಸ್​ಐ ಸಂಗೀತಾ ಪ್ರತಿಭಟನಾಕಾರರನ್ನು ತಡೆದು ‘ಅನುಮತಿ ಪಡೆದಿಲ್ಲ, ಸಂಚಾರ ನಿಯಮ ಉಲ್ಲಂಘಿಸಬಾರದು’ ಎಂದು ಹೇಳಿದರು. ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು.


ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೀವನದ ಜತೆ ಚೆಲ್ಲಾಟ ಆಡುತ್ತಿದೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ರಾಜ್ಯದೆಲ್ಲ್ಲೆಡೆ ಪ್ರತಿಭಟನೆ ಮಾಡುತ್ತಿದೆ. ಏರಿಕೆ ಮಾಡಿರುವ ಬೆಲೆಯನ್ನು ಇಳಿಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.


ಜೆಡಿಎಸ್ ತಾಲೂಕ ಘಟಕದ ಅಧ್ಯಕ್ಷ ಟಿ.ಟಿ. ನಾಯ್ಕ ಮಾತನಾಡಿ, ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳು ಒಂದು ವರ್ಷವಾದರೂ ಸಮರ್ಪಕವಾಗಿ ತಲುಪಿಲ್ಲ. ಈಗ ಪೆಟ್ರೋಲ್, ಡೀಸೆಲ್ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ ಎಂದರು.


ಎಂ.ಜಿ. ನಾಯ್ಕ, ಎಂ.ಜಿ. ಭಟ್, ರಾಜೇಶ ಭಂಡಾರಿ, ವಿನೋದ ನಾಯ್ಕ, ವಿಜಯ ಕಾಮತ, ಸುರೇಶ ಹೊನ್ನಾವರ, ಎಂ.ಎಸ್. ಹೆಗಡೆ, ಶ್ರೀಕಲಾ ಶಾಸ್ತ್ರೀ, ಗೋವಿಂದ ಗೌಡ, ಎಚ್.ಆರ್. ಗಣೇಶ, ಪ್ರದೀಪ ಮೇಸ್ತ, ಲೋಕೇಶ ಮೇಸ್ತ, ಗಜಾನನ ಹೆಗಡೆ, ನಾರಾಯಣ ಹೆಗಡೆ, ಪ್ರಮೋದ ನಾಯ್ಕ, ವಿನಾಯಕ ನಾಯ್ಕ, ರಾಘು ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net