

*ಜಿಲ್ಲೆಯಲ್ಲಿ ಬೀಡುಬಿಟ್ಟಿವೆ 25ಕ್ಕೂ ಹೆಚ್ಚು ಆನೆಗಳು
* ಬಲಿಯಾಗಿವೆ ಅಮಾಯಕ ಜೀವಗಳು
* ಶಾಶ್ವತ ಪರಿಹಾರ ಎಂದು?
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಕಾಡಾನೆಗಳ ಸಮಸ್ಯೆಗೆ ಶಾಶ್ವತ ಮುಕ್ತಿ ಯಾವಾಗ?, ಈ ಸಮಸ್ಯೆಯಿಂದ ಇನ್ನೆಷ್ಟು ವರ್ಷ ನಮ್ಮ ರೈತರು ಬಳಲಬೇಕು?...
ಹೌದು. ಕಾಡಾನೆ ದಾಳಿ ಎಂಬುದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಶಾಶ್ವತ ಸಮಸ್ಯೆ ಎನಿಸಿದೆ. ಕಾಡಾನೆ ದಾಳಿಯಿಂದ ಬೆಳೆಹಾನಿ ತೆಗೆ ಪ್ರಾಣಹಾನಿ ಸಂಭವಿಸಿದ್ದರೂ ಸಮಸ್ಯೆಗೆ ತಾರ್ಕಿಕ ಅಂತ್ಯವಿಲ್ಲದಂತಾಗಿದೆ. ಜಿಲ್ಲೆ ಹಾಗೂ ಜಿಲ್ಲೆಗೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಸಾಮಾನ್ಯ ಎನಿಸಿದೆ. ತಾಲೂಕಿನಲ್ಲಂತೂ ಗಜಪಡೆಯಿಂದ ಪ್ರಾಣ ಲೆಕ್ಕಿಸದೆ
ಬೆಳೆ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಲವು ವರ್ಷಗಳಿಂದ ಕಾಡಾನೆ ದಾಳಿಗೆ ಬೆಳೆ ನಾಶವಾಗುವುದು, ಅಮಾಯಕರ ಪ್ರಾಣಹಾನಿಯಿಂದಾಗಿ ಸಮಸ್ಯೆ ದೊಡ್ಡದಾಗಿ ಕಾಡುತ್ತಿದ್ದರೂ, ಶಾಶ್ವತ ಮುಕ್ತಿ ಸಿಗದಿರುವುದರಿಂದ ಕಾಡಾನೆ ಬಾಧಿತ ಗ್ರಾಮಗಳ ಜನತೆ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುವುದು ಮುಂದುವರಿದಿದೆ.
ಜಿಲ್ಲೆಯ ತೆಂಗಿನಕಲ್ಲು, ಕಬ್ಬಾಳು, ಅಚ್ಚಲು, ನರಿಕಲ್ಲು ತೆಂಗಿನಕಲ್ಲು, ಹಂದಿಗುಂದಿ ಸೇರಿ ಇನ್ನುಳಿದ ಅರಣ್ಯ ಪ್ರದೇಶದಲ್ಲಿ ಸದ್ಯ 25ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಕೆಲವೊಂದು ಒಂಟಿಯಾಗಿ, ಉಳಿದಂತೆ ಗುಂಪುಗುಂಪುಗಳಾಗಿ ರೈತರ ಹೊಲಗದ್ದೆಗಳಿಗೆ ದಾಂಗುಡಿ ಇಡುತ್ತಿವೆ. ಬೆಳೆಯ ತೆಗೆ, ಕೃಷಿ ಪರಿಕರಗಳನ್ನೂ ಇಷ್ಟ ಬಂದಂತೆ ನಾಶಪಡಿಸುತ್ತಿವೆ. ರಾಮನಗರ ಹಾಗೂ ಚನ್ನಪಟ್ಟಣ ವ್ಯಾಪ್ತಿಯಲ್ಲಿ ಅಪಾರವಾದ ಹಸಿರು ಸಂಪತ್ತು ಇರುವುದು ಹಾಗೂ ಭತ್ತ ಹಾಗೂ ರಾಗಿ ಬೆಳೆಯ ಸ್ವಾದದಿಂದ ಕಾಡಾನೆಗಳು ನಾಡನ್ನೇ ಅವಾಸ ಸ್ಥಾನ ಮಾಡಿಕೊಳ್ಳುತ್ತಿವೆ. ಇವುಗಳನ್ನು ಕಾಡಿಗಟ್ಟುವ ಹಾಗೂ ಮತ್ತೆ ನಾಡಿನತ್ತ ಸುಳಿಯದಂತೆ ಮಾಡುವ ಮಹತ್ತರವಾದ ಜವಾಬ್ದಾರಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಮೇಲಿದೆ.
ಈ ಹಿಂದೆ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದು, ಹೊರಗೆ ತೆಗೆದುಕೊಂಡು ಬಿಡಲಾಗಿದ್ದ ಒಂದು ಒಂಟಿ ಸಲಗ ಹಾಗೂ ಮಖ್ನಾ ಆನೆ ಮತ್ತೆ ಈ ಭಾಗಕ್ಕೆ ವಾಪಸ್ಸಾಗಿ ಮತ್ತೆ ಪುಂಡಾಟ ನಡೆಸುತ್ತಿವೆ ಎನ್ನಲಾಗಿದೆ. ಹಿಂದೆ ಈ ಭಾಗದಲ್ಲಿ ತೀವ್ರ ಕಾಟ ನೀಡುತ್ತಿದ್ದ ಮಖ್ನಾ ಹಾಗೂ ಟಸ್ಕರ್ ಆನೆಯನ್ನು ಕಾರ್ಯಾಚರಣೆಯಲ್ಲಿ ಸೆರೆ ಹಿಡಲಾಗಿತ್ತು. ಈಗ, ಈ ಎರಡು ಆನೆಗಳು ಮತ್ತೆ ಇಲ್ಲಿಗೆಯೇ ದಾಂಗುಡಿ ಇಟ್ಟಿವೆ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಮುಗಿದರೆ ಕಾಡಾನೆಗಳ ಹಾವಳಿ ಕಡಿಮೆಯಾಗುತ್ತದೆ ಎನ್ನಲಾಗುತಿತ್ತು. ಆದರೆ, ಈ ಬ್ಯಾರಿಕೇಡ್‌ಗಳನ್ನು ದಾಟಿ ಆನೆಗಳು ಬರುತ್ತಿವೆ ಎಂಬ ಆತಂಕಕಾರಿ ಮಾಹಿತಿ ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಹೊರಬರುತ್ತಿರುವುದು ಆತಂಕ ಹೆಚ್ಚಿಸಿದೆ.
ಕಾಡಾನೆ ದಾಳಿ ತಡೆಗಟ್ಟಲು ಸರ್ಕಾರ ಹಾಗೂ ಅರಣ್ಯ ಇಲಾಖೆ ವಿಫಲವಾಗಿದೆ. ಕೃಷಿ ಮಾಡುವುದೇ ಕಷ್ಟವಾಗಿರುವ ಈ ಸಮಯದಲ್ಲಿ ಕಾಡಾನೆಗಳು ರೈತನ ಬದುಕನ್ನು ಹಾಳು ಮಾಡುತ್ತಿವೆ. ರೈತರ ಆಕ್ರೋಶ ದೊಡ್ಡಮಟ್ಟದಲ್ಲಿ ಭುಗಿಲೇಳುವ ಮುನ್ನ ಸಮಸ್ಯೆಗೆ ಮುಕ್ತಿ ಕಾಣಿಸಬೇಕು. ಕಾಡಿನಿಂದ ನಾಡಿಗೆ ಆನೆಗಳು ಬರದಂತೆ ಯಾವುದಾದರೂ ಯೋಜನೆ ರೂಪಿಸಬೇಕು. ರಾಘವೇಂದ್ರ, ಬಿ.ವಿ.ಹಳ್ಳಿ ರೈತ.