

ಚನ್ನಪಟ್ಟಣ : ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಎಲ್ಲ ಅರ್ಹ ಲಾನುಭವಿಗಳಿಗೆ ಶೀಘ್ರವಾಗಿ ನಿವೇಶನ ಹಂಚುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಪಟ್ಲು ಗ್ರಾಮದಲ್ಲಿ ನಿವೇಶನ ಹಂಚಿಕೆ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಅಂತ ಈಗಾಗಲೇ ಘೋಷಣೆ ಮಾಡಿದ್ದೇವೆ. ನಮ್ಮ ಸರ್ಕಾರ ಜನರ ಮನೆ ಬಾಗಿಲಿಗೆ ಹೋಗುವ ಕೆಲಸ ಮಾಡುತ್ತಿದೆ. ಚನ್ನಪಟ್ಟಣದಲ್ಲಿ ನಡೆಸಿದ ಜನಸ್ಪಂದನ ಸಭೆಯಲ್ಲಿ 22 ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಬಂದಿದ್ದವು. ಆ ಪೈಕಿ 15 ಸಾವಿರದಷ್ಟು ನಿವೇಶನ ಹಾಗೂ ಮನೆಕೋರಿ ಅರ್ಜಿ ಬಂದಿದ್ದವು. ಎಲ್ಲ ಅರ್ಹರಿಗೂ ನಿವೇಶನ ನೀಡಲು ಕ್ರಮಕೈಗೊಂಡಿದ್ದೇವೆ ಎಂದರು.
ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಈಗಾಗಲೇ 120 ಎಕರೆ ಜಾಗ ಗುರುತಿಸಿದ್ದೇವೆ. ಎಲ್ಲೆಲ್ಲಿ ಜಮೀನು ಲಭ್ಯವಿದೆಯೋ ಅಲ್ಲೆಲ್ಲ ಜಾಗ ಗುರುತಿಸುವ ಕೆಲಸವಾಗಿದೆ. ಸುಸಜ್ಜಿತವಾದ ಬಡಾವಣೆ ನಿರ್ಮಿಸಿ ಜನರಿಗೆ ನೀಡುತ್ತೇವೆ. ಮೂಲ ಸವಲತ್ತುಗಳನ್ನು ಒಳಗೊಂಡಂತೆ ದೇವಸ್ಥಾನ, ಶಾಲೆ, ಆಟದ ಮೈದಾನ, ಅಂಗನವಾಡಿಕೇಂದ್ರ ಸೇರಿ ಎಲ್ಲದಕ್ಕೂ ಜಾಗ ಮೀಸಲಿಟ್ಟು, ಹೊಸ ಗ್ರಾಮಗಳನ್ನೆ ಸೃಷ್ಟಿಸುತ್ತೇವೆ. ನಮ್ಮ ಸರ್ಕಾರದ ಮೇಲೆ ಜನರು ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುತ್ತೇವೆ ಎಂದರು.
ಬಡಾವಣೆ ಅಭಿವೃದ್ಧಿಗೆ ಅಗತ್ಯವಾಗಿರುವ 100 ಕೋಟಿ ರೂ. ಅಭಿವೃದ್ಧಿ ಹಣಕ್ಕೆ ಸಿಎಂಗೆ ಮನವಿ ಮಾಡಿದ್ದೇವೆ. ಅವರು ಮಂಜೂರು ಮಾಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಇದರೊಂದಿಗೆ, ನಿವೇಶನಕ್ಕೆ ಕೋರಿ ಬಂದಿರುವ ಅರ್ಜಿಗಳ ಪರಿಶೀಲನೆಯೂ ಆಗುತ್ತಿದೆ. ಸುಳ್ಳು, ನಿಜ ಎಲ್ಲವನ್ನೂ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಈಗಲೂ ನಿವೇಶನಕ್ಕೆ ಅರ್ಜಿ ಸಲ್ಲಿಸುವವರು ಸಲ್ಲಿಸಬಹುದು. ಕನಕಪುರದಲ್ಲಿ ವಾರ್ಡ್‌ನಲ್ಲಿ ಕೂತು ನಿವೇಶನ ಹಂಚಿದ್ದೇವೆ. ಈಗ ಗುರುತಿಸಿರುವ ಜಾಗದ ಅಕ್ಕಪಕ್ಕದಲ್ಲಿರುವವರು ಜಮೀನು ಮಾರಾಟ ಮಾಡಿದರೆ ಅದನ್ನು ಒಳ್ಳೆಯ ಬೆಲೆಗೆ ಖರೀದಿ ಮಾಡುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುವವರು, ಅದಕ್ಕಾಗಿಯೇ ನಾವು ಇಷ್ಟೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದರು.
ಸಮಾವೇಶದಲ್ಲಿ ಉತ್ತರಿಸುವೆ : ಮೈಸೂರಿನ ಜನಾಂದೋಲನ ಸಮಾವೇಶದ ಪೋಸ್ಟರ್‌ನಲ್ಲಿ ಡಿಸಿಎಂ ಭಾವಚಿತ್ರ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿಗಳು. ಹಿಂದುಳಿದ ವರ್ಗದ ನಾಯಕರಾದ ಅವರ ಮೇಲೆ ಹಾಗೂ ನಮ್ಮ ಸರ್ಕಾರದ ಮೇಲೆ ಬಿಜೆಪಿ- ಜೆಡಿಎಸ್‌ನವರು ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ಶನಿವಾರದ ಸಮಾವೇಶದಲ್ಲಿ ಸಿಗುತ್ತದೆ. ಅವರು ಸಿಎಂ, ನಾನು ಪಕ್ಷದ ಅಧ್ಯಕ್ಷ ನಾನೇನ್ ಅವಶ್ಯಕತೆ ಇಲ್ಲ ಅಲ್ಲಿ, ಯಾವುದೇ ಸಮಸ್ಯೆ ಇಲ್ಲ ಎಂದರು.
ನಿನ್ನೆ ಖಾಸಗಿ ಚಾನಲ್ನಲ್ಲಿ ಕೇಂದ್ರ ಸಚಿವ ಎಚ್.ಡಿ.ಕೆ ಮೈನ್ಸ್ ಬಗ್ಗೆ ಪ್ರಸಾರ ಮಾಡಿದ್ದಾರೆ. ಇದಕ್ಕೆಲ್ಲ ಉತ್ತರ ಕೊಡಬೇಕಲ್ವಾ ಮೈನ್ಸ್, ಸ್ಟೀಲ್ ಮಿನಿಸ್ಟರ್ ಕುಮಾರಸ್ವಾಮಿ? ಮೈನ್ಸ್ ಹೇಗೆ ಬಂತು ಉತ್ತರ ಕೊಡಬೇಕಲ್ವಾ ಎಂದು ಟಾಂಗ್ ನೀಡಿದರು.
ಸ್ಥಳ ಪರಿಶೀಲಿಸಿದ ಡಿಸಿಎಂ! : ಡಿಸಿಎಂ ಇತ್ತೀಚೆಗೆ ತಾಲೂಕಿನಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ನೀಡಿದ್ದ ಭರವಸೆಯಂತೆ ನಿವೇಶನ ರಹಿತರಿಗೆ ನಿವೇಶನ ನೀಡುವ ಸಲುವಾಗಿ ನಗರದ ಹನುಮಂತನಗರ ಹಾಗೂ ಪಟ್ಲು ಗ್ರಾಮಗಳಲ್ಲಿ ಗುರುವಾರ ಸ್ಥಳ ಪರಿಶೀಲನೆ ನಡೆಸಿದರು. ಮೊದಲಿಗೆ ಹನುಮಂತನಗರದ ಆಶ್ರಯ ಬಡಾವಣೆಗೆ ಭೇಟಿ ನೀಡಿದ ಅವರು ಅಲ್ಲಿನ ಜಾಗ ಪರಿಶೀಲಿಸಿದರು. ತದನಂತರ, ಪಟ್ಲು ಗ್ರಾಮದ ಸ್ಥಳವನ್ನು ಪರಿಶೀಲನೆ ನಡೆಸಿದರು. ಅಧಿಕಾರಿಗಳೊಂದಿಗೆ ಪ್ರಗತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಬಡಾವಣೆಯ ನೀಲನಕ್ಷೆಯನ್ನು ವೀಕ್ಷಿಸಿದ ಅವರು, ಯಾವುದೇ ಖಾಸಗಿ ಬಡಾವಣೆಗಳಿಗೆ ಕಮ್ಮಿ ಇಲ್ಲದಂತೆ ಬಡಾವಣೆ ಮೂಡಿಬರಬೇಕು ಎಂದು ಆದೇಶಿಸಿದರು.
ಕಾಂಗ್ರೆಸ್ ಮುಖಂಡ ದುಂತೂರು ವಿಶ್ವನಾಥ್, ಎಸ್.ಆರ್.ಪ್ರಮೋದ್, ಎಂ.ಎ.ಕರುಣ್, ರಾಂಪುರ ಮಲವೇಗೌಡ, ಚಂದ್ರಸಾಗರ್ ಸೇರಿ ಹಲವರು ಇದ್ದರು.