

ಹಾರೋಹಳ್ಳಿ : ಹಾರೋಹಳ್ಳಿಯನ್ನು ಮಾದರಿ ತಾಲೂಕನ್ನಾಗಿ ಮಾಡುವುದು ನನ್ನ ಉದ್ದೇಶ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ತಾಲೂಕಿನ ತೋಕತಿಮ್ಮನದೊಡ್ಡಿ ಗ್ರಾಮದಲ್ಲಿ ಬರ ಪರಿಹಾರ ಕಾಮಗಾರಿ ಅಡಿಯಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, 2 ವರ್ಷಗಳಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಇನ್ನು ಹತ್ತು ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿದ್ದು, ಮೂಲ ಸೌಲಭ್ಯಗಳನ್ನು ಒದಗಿಸಿ ಜನರು ನೆಮ್ಮದಿಯಿಂದ ಬದುಕು ನಡೆಸಲು ಸಹಕಾರ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಪಟ್ಟಣಕ್ಕೆ ಕುಡಿಯುವ ನೀರಿನ ಜತೆಗೆ ಹಾರೋಹಳ್ಳಿ ಮರಳವಾಡಿಗೆ 300 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಈಗಾಗಲೇ ಕಾರ್ಯಗತವಾಗಿದೆ. ಚುನಾವಣಾ ಸಂದರ್ಭದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಹಂತ-ಹಂತವಾಗಿ ಈಡೇರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
40 ವರ್ಷ ಆಳ್ವಿಕೆ ಮಾಡಿದವರು ಇಲ್ಲಿ ಯಾವುದೇ ಅಭಿವೃದ್ಧಿ ಮಾಡಿರಲಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಒಂದು ಮೊಸಳೆ ಕಣ್ಣೀರು ಸುರಿಸಿ ಅಧಿಕಾರ ಅನುಭವಿಸುತ್ತಿದ್ದರು. ಎಲ್ಲ ಹುದ್ದೆಗಳನ್ನು ಅನುಭವಿಸಿದರೂ ಅಭಿವೃದ್ಧಿಯತ್ತ ಮುಖ ಮಾಡಿರಲಿಲ್ಲ. ಆದರೆ, ನಮ್ಮ ಉದ್ದೇಶ ಅಭಿವೃದ್ಧಿಯೊಂದೇ ಆಗಿದೆ ಎಂದು ಹೇಳಿದರು.
ತಾಲೂಕು ಗ್ಯಾರಂಟಿ ಅಧ್ಯಕ್ಷ ಜೇಸಿಬಿ ಅಶೋಕ್, ಬಮುಲ್ ನಿರ್ದೇಶಕ ಎಚ್.ಎಸ್. ಹರೀಶ್ ಕುಮಾರ್, ಪಿಡಿಒ ಶ್ರೀದೇವಿ, ಗ್ರಾಪಂ ಮಾಜಿ ಸದಸ್ಯ ಬಿ.ಶಿವಲಿಂಗಯ್ಯ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜಗದೀಶ್‌ಗೌಡ, ಎಂಎಲ್ಎ ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಶ್ರೀಕಂಠಯ್ಯ, ಮುಖಂಡರಾದ ಶಿವಾನಂದ ಬಾಲಾಜಿ, ಸಿದ್ದರಾಜು, ಟಿ.ಎಂ. ಮುನಿಕೃಷ್ಣಪ್ಪ, ನರಸಿಂಹಯ್ಯ, ಮೂರ್ತಿ, ಶಿವಯ್ಯ, ರಾಜಣ್ಣ ಇತರರು ಇದ್ದರು.