

ನಂಜನಗೂಡು: ಇತ್ತೀಚಿನ ದಿನಗಳಲ್ಲಿ ಸಂಘಟನೆಗಳು ರಾಜಕೀಯ ಪಕ್ಷಗಳತ್ತ ವಾಲುತ್ತಿವೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಮೊಬ್ಬಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ನೂತನ ಗ್ರಾಮ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳ ವೈಫಲ್ಯದ ಜತೆಗೆ ರೈತರ ವೈಫಲ್ಯ ಕೂಡ ಇದೆ. ರೈತರು ಹೋರಾಟ ಮಾಡುವ ಶಬ್ದ ಸರ್ಕಾರಗಳಿಗೆ ಕೇಳುತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿ ಹೆಚ್ಚಿನ ಸಂಘಟನೆಗಳು ಆಗಬೇಕಾಗಿದೆ. ದೇವನಹಳ್ಳಿಯಲ್ಲಿ 1170 ಎಕರೆ ರೈತರ ಜಮೀನನ್ನು ಸರ್ಕಾರ ಕಿತ್ತುಕೊಂಡಿದೆ. ಇದೇ ರೀತಿ ನಂಜನಗೂಡಿನಲ್ಲೂ 440 ಎಕರೆ ಡಿನೋಟಿಫಿಕೇಶನ್ ಆಗಿದೆ. ಕಾರ್ಖಾನೆಗಳು ಜಾಗವನ್ನು ಖರೀದಿಸಿ ನಂತರ ಕಾರ್ಖಾನೆಗಳನ್ನು ಮುಚ್ಚಿ, ಸರ್ಕಾರಿ ಜಾಗವನ್ನು ಮಾರಾಟ ಮಾಡಿ ಬೇರೆ ಬೇರೆ ಜಾಗಗಳಲ್ಲಿ ಅಪಾರ್ಟ್ಮೆಂಟ್ ಕಟ್ಟಿಕೊಂಡು ಉದ್ಧಾರ ಆಗುತ್ತಿದ್ದಾರೆ. ಆದರೆ ರೈತರು ಮಾತ್ರ ಜಮೀನುಗಳನ್ನು ಕಳೆದುಕೊಂಡು ಹಿಂದುಳಿಯುತ್ತಿದ್ದಾರೆ. ಸಂಘಟನೆಯ ಉದ್ದೇಶ ರೈತರಿಗೆ ಒಳ್ಳೆಯದಾಗಬೇಕು. ಹಳ್ಳಿಗಳಲ್ಲಿ ಇದ್ದ ಸಂಸ್ಕೃತಿ, ಜಮೀನು, ಆರ್ಥಿಕ ಮಟ್ಟ ಹೆಚ್ಚಿಸುವುದು ಉದ್ದೇಶವಾಗಿರಬೇಕು ಎಂದರು.
ರಾಜ್ಯ ಸಂಘದ ಅಧ್ಯಕ್ಷ ಹಾಡ್ಯ ರವಿ ಮಾತನಾಡಿ, ರಾಜ್ಯ ಸರ್ಕಾರದ ಉಡಾಫೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯದಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ ದ್ರೋಹವಾಗಿದೆ. 2023ರಲ್ಲಿ ರಾಜ್ಯ ಸರ್ಕಾರ ಆದೇಶ ಮಾಡಿದ 950 ಕೋಟಿ ರೂ.ಗಳನ್ನು ತಕ್ಷಣ ರೈತರಿಗೆ ಕೊಡಿಸಬೇಕು. 2024 -25ನೇ ಸಾಲಿನ ಉಪ ಉತ್ಪನ್ನ ಲಾಭಾಂಶವನ್ನು ರೈತರಿಗೆ ಕೊಡಿಸಬೇಕು. ಈ ವರ್ಷದ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ನಿಗದಿ ಮಾಡಿರುವ ಬೆಲೆಯನ್ನು ಮರು ಪರಿಶೀಲಿಸಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬೆಲೆ 4500 ರೂ. ಅನ್ನು ಒಂದು ಟನ್‌ಗೆ ಕೊಡಬೇಕು. ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಮೋಸ ಆಗುತ್ತಿದ್ದು, ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ ಗಮನ ಹರಿಸುತ್ತಿಲ್ಲ ಎಂದರು.
ಗೌರವಾಧ್ಯಕ್ಷ ದೇವಿ ರಮ್ಮನಹಳ್ಳಿ ನಂದೀಶ್, ಮುದ್ದಹಳ್ಳಿ ಚಿಕ್ಕ ಸ್ವಾಮಿ, ಅಂಡುವಿನಹಳ್ಳಿ ಮರಿಸ್ವಾಮಿ, ಅರಳಿಕಟ್ಟೆ ಕುಮಾರ್, ತಾಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಕಸುವಿನಹಳ್ಳಿ ಮಂಜೇಶ್, ಹುಂಡಿ ಮಹೇಶ್, ಅಂಡುವಿನಹಳ್ಳಿ ಸಿದ್ದರಾಜು, ರವಿ, ಸೋಮಣ್ಣ, ಹದಿನಾರು ಭುಜಂಗಪ್ಪ, ತಗಡೂರು ನಾಗೇಶ್, ದೇವನೂರು ಪಶುಪತಿ, ನಂಜನಹಳ್ಳಿ ಮೂರ್ತಿ, ದೇವಿರಮ್ಮನಹಳ್ಳಿ ಶಿವಮೂರ್ತಿ, ಎಂಎಂ ಗುರುಸ್ವಾಮಿ, ವೃಷಬೇಂದ್ರ, ಮಂಜುನಾಥ, ಮಲ್ಲೇಶ್, ಅಶೋಕ್ ಕುಮಾರ್ ಇದ್ದರು.