ಶೋಷಣೆಗೆ ಕಡಿವಾಣ ಹಾಕಲು ಸಂಘಟನೆ ಅಗತ್ಯ

FotoJet
Published on

ಕದಸಂಸ ಸಂಚಾಲಕ ಸು.ಧಾ.ವೆಂಕಟೇಶ್ ಹೇಳಿಕೆ ಚಿಕ್ಕಬಳ್ಳಾಪುರದಲ್ಲಿ ಕೋರೆಗಾಂವ್ ವೀರಯೋಧರ ಸ್ಮರಣೆ

ಚಿಕ್ಕಬಳ್ಳಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ನಗರದಲ್ಲಿ ಬುಧವಾರ ಭೀಮಾ ಕೋರೆಗಾಂವ್ ವೀರಯೋಧರ ಸ್ಮರಣೆ ಮತ್ತು ವಿಜಯೋತ್ಸವ ಆಚರಿಸಿದರು. ಅಂಬೇಡ್ಕರ್ ಭವನದಿಂದ ಬಾವುಟಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದ ಕಾರ್ಯಕರ್ತರು, ಶಿಡ್ಲಘಟ್ಟ ವೃತ್ತದ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ಸಂವಿಧಾನ ಶಿಲ್ಪಿಯ ಭಾವಚಿತ್ರವನ್ನು ಹೊಂದಿದ್ದ ಕೋರೆಗಾಂವ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕದಸಂಸ ಸಂಘಟನಾ ಸಂಚಾಲಕ ಸು.ಧಾ.ವೆಂಕಟೇಶ್ ಮಾತನಾಡಿ, ಸ್ವತಂತ್ರ ಭಾರತದಲ್ಲೂ ಪ್ರಸ್ತುತ ಅಸ್ಪೃಶ್ಯತೆ, ಶೋಷಣೆ ದೂರವಾಗಿಲ್ಲ. ಸಂವಿಧಾನ, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗುತ್ತಿದೆ. ಇಂತಹುವುಗಳಿಗೆ ಕಡಿವಾಣ ಹಾಕಲು ಶೋಷಿತರ ಪ್ರಬಲ ಸಂಘಟನೆ ಅಗತ್ಯವಿದೆ ಎಂದು ತಿಳಿಸಿದರು. ಶೋಷಿತರಲ್ಲಿ ಭೀಮಾ ಕೋರೆಗಾಂವ್ ಯುದ್ಧವು ಸ್ವಾಭಿಮಾನ, ಧೈರ್ಯವನ್ನು ತುಂಬಿತು. ಮಹಾರಾಷ್ಟ್ರದ ಪೇಶ್ವೆ ಎರಡನೇ ಬಾಜಿರಾಯನ ಕಾಲದಲ್ಲಿ ತೀವ್ರವಾಗಿ ಕಾಡುತ್ತಿದ್ದ ಅಸ್ಪೃಶ್ಯತೆ, ಶೋಷಣೆಯ ನಡುವೆಯೂ ಬ್ರಿಟಿಷರ ದಾಳಿ ವಿರುದ್ಧವಾಗಿ ರಾಜನಿಗೆ ಬೆಂಬಲಿಸಲು ಮುಂದಾದವರನ್ನು ಜಾತಿ ಹೆಸರಿನಲ್ಲಿ ಕೀಳಾಗಿ ಕಾಣಲಾಯಿತು. ಇದರಿಂದ ಸಿಡಿದೆದ್ದ ಬುಡಕಟ್ಟು ಜನರು ದಾಳಿ ನಡೆಸಿ ಪೇಶ್ವೆಯನ್ನು ಕೊಂದು ಹಾಕಿದರು ಎಂದರು. ಕ್ರಾಂತಿಕಾರಿ ಹೋರಾಟದ ಸ್ಮರಣೆಯ ಹಿನ್ನೆಲೆಯಲ್ಲಿ ಕೋರೆಗಾಂವ್ ಸ್ಮಾರಕಕ್ಕೆ ಪ್ರತಿವರ್ಷ ಅಂಬೇಡ್ಕರ್ ಅವರು ಜ.1ರಂದು ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಅದೇರೀತಿ ಇಂದು ಪ್ರತಿವರ್ಷ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಕಲಾವಿದ ಗ.ನ ಅಶ್ವತ್ಥ್, ಮುಖಂಡರಾದ ನಾರಾಯಣಸ್ವಾಮಿ, ಗಂಗಾಧರ್ ಮತ್ತಿತರರು ಇದ್ದರು.

ಸಂಘಟನೆ ವಿಜಯೋತ್ಸವ

ಅಂಬೇಡ್ಕರ್ ಸಂಘಟನೆಯ ವತಿಯಿಂದ ಭೀಮಾ ಕೋರೆಗಾಂವ್ ವೀರ ಯೋಧರ ಸ್ಮರಣೆ ಮತ್ತು ವಿಜಯೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಜೈ ಭೀಮ್ ವಿದ್ಯಾರ್ಥಿ ವಸತಿ ನಿಲಯದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಿಹಿ ಹಂಚಿ, ಸಂಭ್ರಮಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ಎಂ.ನಾಗೇಶ್, ಆರ್.ಎಸ್.ಮುನಿಕೃಷ್ಣ, ಮುನಿರಾಜು, ನಾರಾಯಣಸ್ವಾಮಿ, ಆಂಜಿನಪ್ಪ, ಮೂರ್ತಿ, ಮಧು, ರಾಮಚಂದ್ರ, ಕೆಂಪಣ್ಣ, ಎಸ್.ಮೂರ್ತಿ, ಮುಖಂಡರಾದ ಶ್ರೀನಿವಾಸಯ್ಯ, ಸುಲಿಕುಂಟೆ ವೆಂಕಟೇಶ್, ವೆಂಕಟರಾಮ್, ನಾಗರಾಜ್, ಎನ್.ಶ್ರೀನಿವಾಸ್ ಮುನಿರಾಜ್, ಅಂಜಿ, ವೆಂಕಟ್, ಚಿಕ್ಕಪ್ಪಯ್ಯ, ನಂದೀಶ್ ಕೃಷ್ಣಯ್ಯ, ಚಂದ್ರಮೋಹನ್, ಶಂಕರ್, ಆನಂದ್, ಡೇವಿಡ್ ಸರ್ದಾರ್ ಚಾಂದ್ ಪಾಷಾ) ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net