ಅಂಗಾಂಗ ಕಸಿ ಆಸ್ಪತ್ರೆಗಳ ನೋಂದಣಿಗೆ ತಪಾಸಣಾ ಸಮಿತಿ ರಚನೆ

organ donation
Published on

ಬೆಂಗಳೂರು: ತಮಿಳುನಾಡು, ಕೇರಳದಲ್ಲಿ ಅನುಸರಿಸುತ್ತಿರುವ ಪದ್ಧತಿಯಂತೆ ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಕಾಯಿದೆ 1994ರ ಅಡಿ ರಾಜ್ಯದಲ್ಲೂ ಅಂಗಾಂಗ ಕಸಿ ಆಸ್ಪತ್ರೆಗಳ ನೋಂದಣಿ ಮತ್ತು ನವೀಕರಣಕ್ಕಾಗಿ ತಪಾಸಣಾ ಸಮಿತಿ ರಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಅಂಗಾಂಗ ಕಸಿ ಅಡಿ ಯಾವುದೇ ಆಸ್ಪತ್ರೆ ನೋಂದಣಿಗೆ ಅರ್ಜಿ ಸಲ್ಲಿಸಿದರೆ ಈ ಸಮಿತಿ ತಪಾಸಣೆ ನಡೆಸಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ನೀಡಬೇಕು. ಅದರ ಆಧಾರದ ಮೇಲೆ ನೋಂದಣಿಗೆ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ.

ತಪಾಸಣಾ ಸಮತಿ ಸದಸ್ಯರು:

ಮೂತ್ರ ಪಿಂಡ ಕಸಿಗೆ ಸಂಬಂಧಿಸಿದಂತೆ ನೆಫ್ರೋ ಯೂರಾಲಜಿ ಸಂಸ್ಥೆ ನಿರ್ದೇಶಕರು ಅಥವಾ ಪ್ರತಿನಿಧಿ, ಯಕೃತ್ತು, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಕಸಿಗೆ ಸಂಬಂಧಿಸಿದಂತೆ ಗ್ಯಾಸ್ಟ್ರೋ ಎಂಟರಾಲಜಿ ವಿಜ್ಞಾನ ಮತ್ತು ಅಂಗಾಂಗ ಕಸಿ ಸಂಸ್ಥೆ (ಐಜಿಒಟಿ) ಸಂಸ್ಥೆ ನಿರ್ದೇಶಕರು ಅಥವಾ ಪ್ರತಿನಿಧಿ, ಹೃದಯ, ಶ್ವಾಸಕೋಶ ಕಸಿಗೆ ಸಂಬಂಧಿಸಿದಂತೆ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ಕಣ್ಣಿನ ಬ್ಯಾಂಕ್ ಹಾಗೂ ಕಾರ್ನಿಯಾ ಕಸಿಗೆ ಸಂಬಂಧಿಸಿದಂತೆ ಮಿಂಟೋ ನೇತ್ರ ಆಸ್ಪತ್ರೆಯ ಪ್ರತಿನಿಧಿ, ಅಂಗಾಂಶ (ಟಿಶ್ಯೂ) ಬ್ಯಾಂಕ್, ಅಸ್ತಿಮಜ್ಜೆ, ಅಮ್ನಿಯನ್, ನಾಲಿಗೆ ಇತ್ಯಾದಿಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿರ್‌ಸಿಐ) ಹೆಮಟಾಲಜಿಸ್ಟ್, ಪ್ಯಾಥಾಲಜಿಸ್ಟ್, ಕೈಕಸಿಗೆ ಎಸ್‌ಜಿಐಟಿಒ ನಿರ್ದೇಶಕರು ಅಥವಾ ಕಸಿ ಮೂಳೆ ಶಸ್ತ್ರಚಿಕಿತ್ಸಕ, ಚರ್ಮ ಬ್ಯಾಂಕ್‌ಗೆ ಬಿಎಂಸಿಆರ್‌ಐನ ಪ್ಲಾಸ್ಟಿಕ್ ಸರ್ಜನ್, ಗರ್ಭಾಶಯ ಕಸಿಗೆ ಬಿಎಂಆರ್‌ಸಿಐನ ಸ್ತ್ರೀರೋಗ ವಿಶೇಷ ತಜ್ಞರು, ವಿಕ್ಟೋರಿಯಾ ಫೋರೆನ್ಸಿಕ್ ವಿಭಾಗದ ಮುಖ್ಯಸ್ಥರು ಸದಸ್ಯರಾಗಿರುತ್ತಾರೆ. ಜೀವನಸಾರ್ಥಕತೆ (ಸೊಟ್ಟೊ) ಕಾರ್ಯಕ್ರಮ ಅಧಿಕಾರಿಯು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಸಮಿತಿಯ ಜವಾಬ್ದಾರಿಗಳು:

ಅಂಗಾಂಗ ಕಸಿ ಕೇಂದ್ರ ನೋಂದಣಿಗೆ ಅರ್ಜಿ ಸಲ್ಲಿಸುವ ಆಸ್ಪತ್ರೆಗಳ ಸಮಗ್ರ ತಪಾಸಣೆ ನಡೆಸುವುದು. ನಿಗದಿತ ಮಾದರಿಗಳ ಪ್ರಕಾರ ಶಾಸನಬದ್ಧ ಪರವಾನಗಿಗೆ ಮತ್ತು ದಾಖಲೆಗಳನ್ನು ಪರಿಶೀಲಿಸುವುದು. ಕಸಿ ತಂಡದ ಅರ್ಹತೆಗಳು ಮತ್ತು ಅನುಭವನವನ್ನು ಮೌಲ್ಯಮಾಪನ ಮಾಡಿ ಆಪರೇಷನ್ ಥಿಯೇಟರ್, ಶಸ್ತ್ರಿಕಿತ್ಸಾ ಉಪಕರಣಗಳು ಮತ್ತು ಐಸಿಯು ಸೌಲಭ್ಯಗಳು ಸೇರಿ ಆಸ್ಪತ್ರೆಯ ಮೂಲಸೌಕರ್ಯವನ್ನು ಮೌಲ್ಯಮಾಪನ ಮಾಡಿ ಶಿಫಾರಸು ವರದಿ ನೀಡುವುದು.

ಕಾರ್ಯವಿಧಾನಗಳು:

ಸಮಿತಿಯ ಪರಿಶೀಲನಾ ಉದ್ದೇಶಗಳಿಗಾಗಿ ಅಗತ್ಯವಿದ್ದಾಗ ಸಭೆ ಸೇರುವುದು. 48 ಗಂಟೆಗಳ ಸೂಚನೆಯೊಂದಿಗೆ ತುರ್ತು ಸಭೆ ಕರೆಯುವುದು. ಕಾರ್ಯವಿಧಾನಗಳಿಗೆ ಕನಿಷ್ಟ ಮೂರು ಸದಸ್ಯರ ಕೋರಂ ಇರಬೇಕು. ಎಲ್ಲಾ ಶಿಫಾರಸುಗಳನ್ನು ಸರಿಯಾದ ಸಮರ್ಥನೆಯೊಂದಿಗೆ ದಾಖಲಿಸಬೇಕು. ಈ ಎಲ್ಲಾ ಕ್ರಮಗಳನ್ನು ಅನುಸರಿಸುವ ಮೂಲಕ ಅಂಗಾಂಗ ಕಸಿ ಕೇಂದ್ರ ನೋಂದಣಿ ಅಥವಾ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಆಸ್ಪತ್ರೆಗಳ ಸಮಗ್ರ ತಪಾಸಣೆ ನಡೆಸಿ ತಪಾಸಣಾ ಸಮಿತಿಯು ವಿವರವಾದ ವರದಿ ಮತ್ತು ಶಿಫಾರಸುಗಳನ್ನು ಸೂಕ್ತ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net