

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ಎರಡು ದಿನ ಮುಂದುವರಿಯಲಿದೆ.ಬಾಗಲಕೋಟೆ, ಬೆಂಗಳೂರು ನಗರ, ಬೆಂ.ಗ್ರಾಮಾಂತರದ ಹೆಸರುಟ್ಟ, ಚಾಮರಾಜನಗರದ ಹರದನಹಳ್ಳಿ,ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನ ಮೂಡಗೆರೆ,ಚಿತ್ರದುರ್ಗದ ಹಿರಿಯೂರು,ಹಾವೇರಿಯ ಹನುಮಾನ್ ಮಟ್ಟಿ, ಕೊಡಗಿನ ಗೊಣಿಕೊಪ್ಪ, ಕೊಪ್ಪಳ, ಮಂಡ್ಯದ ಕೆ.ಆರ್.ಪೇಟೆ, ರಾಮನಗರ, ಮೈಸೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸೋಮವಾರ ವರ್ಷಧಾರೆಯಾಗಿದೆ.
ದಕ್ಷಿಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ನೈಋತ್ಯ ಮಾನ್ಸೂನ್ ಆರಂಭವಾಗಿರುವ ಪರಿಣಾಮ ಕೇರಳದಲ್ಲಿ ಮೇ 21ರಿಂದ ಮೇ 23ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಮೇ 24ರ ಬೆಳಗ್ಗೆ ವಾಯುಭಾರ ಕುಸಿತ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮೇ 21ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅರ್ಲಟ್ ಘೋಷಿಸಿದೆ.ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ದಾವಣಗೆರೆ ಮತ್ತು ವಿಜಯನಗರದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅರ್ಲಟ್ ಇರಲಿದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ,ದಕ್ಷಿಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.
ರಾಜ್ಯದ ಕೆಲವೆಡೆ ಭಾರಿ ಬಿರುಗಾಳಿ ಸಹಿತ ಗುಡುಗು ಮಿಂಚು ಸಹಿತ ಮಳೆಯಾಗಲಿದೆ.ಮುಂದಿನ ಐದು ದಿನಗಳವರೆಗೆ ಒಳನಾಡಿನ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ 2-4 ಡಿ.ಸೆ.ಉಷ್ಣಾಂಶ ಇಳಿಕೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು,ಮಿಂಚು ಸಹಿತ ಹಗುರದಿಂದ ಕೂಡಿದ ಸಾಧಾರಣ ವರ್ಷಧಾರೆಯಾಗಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿ.ಸೆ ಹಾಗೂ 21 ಡಿ.ಸೆ. ಇರಲಿದೆ