

ಬೆಂಗಳೂರು: ರಾಜ್ಯಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸಲು ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಪೂರ್ವ ಮುಂಗಾರಿನ ಆರ್ಭಟ ಇನ್ನಷ್ಟು ಜೋರಾಗಿದೆ.
ಬಂಗಾಳಕೊಲ್ಲಿಯಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣದಿಂದ ಬೆಂಗಳೂರು ನಗರ ಸೇರಿ ರಾಜ್ಯದ ಹಲವೆಡೆ ಶನಿವಾರವೂ ಮಳೆಯಾಗಿದೆ. ಏಪ್ರಿಲ್ ಮತ್ತು ಪ್ರಸಕ್ತ ತಿಂಗಳಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ಬಿತ್ತಲು ಜಮೀನುಹಸನಗೊಳಿಸುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ. ಹಾಸನ ಸೇರಿ ಹಳೆಯ ಮೈಸೂರು ಭಾಗದಲ್ಲಿ ಜೋಳ ಬಿತ್ತನೆ ಕಾರ್ಯ ನಡೆಯುತ್ತಿದೆ.
ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಚಿತ್ರದುರ್ಗ, ತುಮಕೂರಿನಲ್ಲಿ ಮೇ 19 ಮತ್ತು ಮೇ 20ರಂದು ಹಾಗೂ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ,ಗದಗದಲ್ಲಿ ಮೇ 20ರಿಂದ ಮುಂದಿನ 2 ದಿನ ಹಾಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮೇ 21ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅರ್ಲಟ್ ಕೊಟ್ಟಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಮೇ 19ರಂದು ಯೆಲ್ಲೋ ಅರ್ಲಟ್ ಸಹ ನೀಡಲಾಗಿದೆ.
ಬೆಂಗಳೂರು ನಗರ, ಬೆಂ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ವಿಜಯಪುರದಲ್ಲಿ ಮೇ 19ರಂದು ಬಿರುಸಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್ ಕೊಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.