

ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ನೈಋತ್ಯ ಮಾನ್ಸೂನ್(ಮುಂಗಾರು ಮಾರುತ) ರೂಪುಗೊಳ್ಳುವುದಕ್ಕೆ ಆಶಾದಾಯಕ ವಾತಾವರಣ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಡಿಕೆಯಂತೆ ಭಾನುವಾರ (ಮೇ 19) ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ಮಾನ್ಸೂನ್ ಆರಂಭವಾಗಲಿದೆ. ಈ ವೇಳೆ ಮಾರುತಗಳು ಪ್ರಬಲವಾದರೆ ತಿಂಗಳಾಂತ್ಯಕ್ಕೆ ಕೇರಳಕ್ಕೆ ಪ್ರವೇಶಿಸಲಿವೆ. ಕೇರಳಕ್ಕೆ ಬಂದಿರುವ ಮಾರುತಗಳು ಪ್ರಬಲವಾದರೆ ಅದೇ ದಿನ ಅಥವಾ ಒಂದೆರೆಡು ದಿನದಲ್ಲಿ ಕರ್ನಾಟಕಕ್ಕೆ ಪ್ರವೇಶಿಸಲಿವೆ ಎಂದುಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿದೆ. ಜೂನ್ನಿಂದ ಸೆಪ್ಟೆಂಬರ್ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ತುಸು ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈಗಾಗಲೇ ಮೂನ್ಸೂಚನೆ ಕೊಟ್ಟಿದೆ. ಜಾಗತಿಕ ನಿಯಂತ್ರಕ ಸೂಚ್ಯಂಕ ಪ್ರಕಾರ ಕಳೆದ ಫೆಬ್ರವರಿಯಿಂದ ದುರ್ಬಲಗೊಂಡು ಮಧ್ಯಮ ಹಂತಕ್ಕೆ ಬಂದಿರುವ "ಎಲ್ ನಿನೋ' ಜೂನ್ ಅಥವಾ ಜುಲೈನಲ್ಲಿ ಶೂನ್ಯ ಹಂತಕ್ಕೆ ಬರಲಿದೆ. ನಂತರ, "ಲಾ-ನಿನಾ' ಬರಲಿದೆ. ಇದರಿಂದಾಗಿ ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುಲಿದೆ.
ಶೂನ್ಯ ಹಂತಕ್ಕೆ ಎಲ್ ನಿನೋ:
ಫೆಸಿಫಿಕ್ ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್ನಿಂದ 1.5 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚು ದಾಖಲಾದರೆ "ಎಲ್ ನಿನೋ' ಉಂಟಾಗುತ್ತದೆ. ಫೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ "ಲಾ-ನಿನಾ' ಎಂದು ಕರೆಯಲಾಗುತ್ತಿದೆ. ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮೇರೆಗೆ ಮಳೆ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ ಎಲ್ ನಿನೋ ಪ್ರಭಾವದಿಂದಾಗಿ ಮುಂಗಾರಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಇದರಿಂದಾಗಿ ರಾಜ್ಯದಲ್ಲಿ ತೀವ್ರ ಮಳೆ ಕುಂಠಿತವಾಗಿ ಬರಗಾಲ ಉಂಟಾಗಿತ್ತು. ಜೂನ್ ಅಥವಾ ಜುಲೈನಲ್ಲಿ "ಎಲ್ ನಿನೋ'ಶೂನ್ಯ ಹಂತಕ್ಕೆ ಬರಲಿದೆ.
4 ದಿನ ಮಳೆ ಬಿರುಸು:
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಮೇಲ್ಮೆ ಸುಳಿಗಾಳಿ, ತೇವಾಂಶ ಭರಿತ ಮೋಡ ಇರುವ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಹಾಸನ, ಬೆಂಗಳೂರು, ಕೊಪ್ಪದಳ ಗಂಗಾವತಿ, ಚಿಕ್ಕಮಗಳೂರಿನ ಮೂಡಗೆರೆ ಸೇರಿ ರಾಜ್ಯದ ಇತರೆ ಪ್ರದೇಶಗಳಲ್ಲಿ ಶುಕ್ರವಾರ ವರುಣಾರ್ಭಟ ಜೋರಾಗಿತ್ತು. ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ,ಮೈಸೂರು,ಶಿವಮೊಗ್ಗದಲ್ಲಿ ಮೇ 18ರಂದು ಭಾರಿ ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಘೋಷಿಸಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮುಂದಿನ 4 ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.