ಆರೋಗ್ಯ ಕೋಶಕ್ಕೆ ದೂರು ಸಲ್ಲಿಸಲು ಅವಕಾಶ

20ark1
Published on

ಅರಕಲಗೂಡು: ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯಲ್ಲಿ ಆಗಬಹುದಾದ ಮೋಸ, ಲಂಚ ಪಡೆಯವುದು, ಮೇಲಧಿಕಾರಿಗಳಿಂದ ಸಿಬ್ಬಂದಿಗೆ ಕಿರುಕುಳ ಕುರಿತಂತೆ ರಾಜ್ಯ ಆರೋಗ್ಯ ಕೋಶಕ್ಕೆ ದೂರು ಸಲ್ಲಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ತನಿಖಾಧಿಕಾರಿ ಕೆ.ಆರ್.ಶ್ರೀನಿವಾಸ್ ತಿಳಿಸಿದರು.


ತಾಲೂಕಿನ ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯರು, ಸಿಬ್ಬಂದಿ ಮತ್ತು ರಕ್ಷಾ ಸಮಿತಿ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಮಾತನಾಡಿದರು. ಕೊಣನೂರು ಆಸ್ಪತ್ರೆಯಲ್ಲಿ 3 ಜನ ತಜ್ಞ ವೈದ್ಯರ ಹುದ್ದೆ ಖಾಲಿ ಇದ್ದರೂ ಇರುವ ಸಿಬ್ಬಂದಿ ಬಳಸಿಕೊಂಡು ಉತ್ತಮ ಸೇವೆ ನೀಡಲಾಗುತ್ತಿದೆ. ಹಾಗಾಗಿ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ 7ನೇ ಸ್ಥಾನ ಪಡೆದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೇವೆ ನೀಡದೆ 100 ಜನ ಬಡವರನ್ನು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಮಾಡಿದ್ದಲ್ಲಿ 100 ಕುಟುಂಬಗಳನ್ನು ಬಡತನ ರೇಖೆಗಿಂತ ಕೆಳಗೆ ತಳ್ಳಿದಂತಾಗುತ್ತದೆ ಎಂದು ಹೇಳಿದರು.
ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಗುಣಮಟ್ಟದ ಔಷಧಗಳು, ಉಪಕರಣಗಳನ್ನು ಕಡಿಮೆ ದರದಲ್ಲಿ ಒದಗಿಸುವ ಜೆಮ್ ಪೋರ್ಟ್‌ನಲ್ಲಿ ಕೊಂಡುಕೊಳ್ಳುತ್ತಾ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡುವ ಕೆಲಸವನ್ನು ಈವರೆಗೂ ರಾಜ್ಯದ ಕೆಲವೇ ಆಸ್ಪತ್ರೆಗಳು ಮಾಡುತ್ತಿವೆ. ಈ ಪೈಕಿ ಕೊಣನೂರು ಆಸ್ಪತ್ರೆ ಮಂಚೂಣಿಯಲ್ಲಿರುವುದು ಗಮನಾರ್ಹ. ಸಮುದಾಯ ಆರೋಗ್ಯ ಕೇಂದ್ರವು 2021ರಲ್ಲಿ 10 ಲಕ್ಷ ರೂ., 2022ರಲ್ಲಿ 11 ಲಕ್ಷ ರೂ. ಮತ್ತು 2022ರಲ್ಲಿ 62 ಲಕ್ಷ ರೂ.ಅನುದಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.


ಗ್ರಾಪಂ ಅಧ್ಯಕ್ಷೆ ಮಿಸ್ಬಾ ಮಾತನಾಡಿ, ಆಸ್ಪತ್ರೆಗೆ ಅಗತ್ಯವಿರುವ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವಂತೆ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದರು.


ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುನೀಲ್, ಪಿಡಿಒ ಶ್ಯಾಮ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net