ಪಹಲ್ಗಾಮ್ ಹತ್ಯಾಕಾಂಡ ವಿರೋಧ

Published on

ಕುದೂರು : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡಿಸಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಗುರುವಾರ ಸಂಜೆ ಶಾಂತಿಯುತ ಮೆರವಣಿಗೆ ನಡೆಸಿ, ನಂತರ ಬಸ್ ನಿಲ್ದಾಣದಲ್ಲಿ ಮೃತಪಟ್ಟವರಿಗೆ ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಅರ್ಪಿಸಿದರು.

ಕೆಂಪೇಗೌಡ ಸರ್ಕಲ್ ನಿಂದ ಆರಂಭವಾದ ಮೆರವಣಿಗೆಯು ಬಸ್ ನಿಲ್ದಾಣದ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಇದೇ ವೇಳೆ ಭಯೋತ್ಪಾದಕರ ವಿರುದ್ಧ ಘೋಷಣೆ ಕೂಗಿದರು. ಕೆಂಪೇಗೌಡ ಸರ್ಕಲ್, ಬಿಜಿಎಸ್ ಸರ್ಕಲ್ನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಸಾಂಕೇತಿಕವಾಗಿ ಪ್ರತಿಭಟಿಸಲಾಯಿತು. ನಂತರ ಬಸ್ ನಿಲ್ದಾಣದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಗ್ರಾಪಂ ಸದಸ್ಯ ಕೆ.ಟಿ. ವೆಂಕಟೇಶ್, ಹಿಂದು ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ಭಯೋತ್ಪಾದನಾ ಕೃತ್ಯವು ಹೇಡಿತನದಿಂದ ಕೂಡಿದೆ. ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಉಪನ್ಯಾಸಕ ಗಂ.ದಯಾನಂದ್ ಮಾತನಾಡಿ, ಹಿಂದು ಎಂಬ ಕಾರಣಕ್ಕೆ ನಡೆಯುವ ಇಂತಹ ಭಯೋತ್ಪಾದನಾ ಕೃತ್ಯಗಳಿಗೆ ತಕ್ಕ ಶಾಸ್ತಿಯಾಗಲೇಬೇಕು. ಧರ್ಮಾಧಾರಿತ ಭಯೋತ್ಪಾದನೆ ವಿರುದ್ಧ ಹಿಂದುಗಳು ಒಂದಾಗಬೇಕು. ಇಲ್ಲದಿದ್ದರೆ ಈಗ ಕಾಶ್ಮೀರದಲ್ಲಿ ಸಂಭವಿಸಿರುವ ಘಟನೆ ಮುಂದೆ ನಮ್ಮಲ್ಲಿಗೂ ವ್ಯಾಪಿಸಲಿದೆ ಎಂದು ಹೇಳಿದರು.

ಮುಖ್ಯಶಿಕ್ಷಕ ಕೇಶವಮೂರ್ತಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ತುಂಬುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬಿಸ್ಕೂರು ಗ್ರಾಪಂ ಮಾಜಿ ಅಧ್ಯಕ್ಷ ಸುಹೇಲ್ ಮಾತನಾಡಿದರು.

ಮುಖಂಡರಾದ ಮಂಜೇಶ್ ಕುಮಾರ್, ಮಿಥುನ್ ಶೆಟ್ಟಿ, ನಾಗರಾಜು, ರಂಗಸ್ವಾಮಿ, ಜಾವೀದ್, ರಂಗಸ್ವಾಮಯ್ಯ, ಗೋವಿಂದರಾಜು, ಅಣ್ಣಪ್ಪ, ಕೇಶವಮೂರ್ತಿ, ಬಾದೇಗೌಡ, ಮೋಹನ್ ಕುಮಾರ್, ವರ್ತಕರ ಸಂಘದ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net