

ಕನಕಪುರ : ತಾಲೂಕಿನ ಸಾತನೂರು ಹೋಬಳಿ ಕಚುವನಹಳ್ಳಿಯಲ್ಲಿ ನೂತನವಾಗಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಪ್ರಾರಂಭಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಬುಧವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳೀಯ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳನ್ನು ಆರಂಭಿಸುವುದರಿಂದ ಗ್ರಾಮಸ್ಥರ ಆರೋಗ್ಯ ಹಾಳಾಗುವುದಲ್ಲದೇ, ಕೆಲ ಕುಟುಂಬಗಳ ನಾಶಕ್ಕೂ ಕಾರಣವಾಗುತ್ತದೆ. ಶಾಂತಿಯುತ ಗ್ರಾಮದಲ್ಲಿ ಅಶಾಂತಿ ಉಂಟುಮಾಡುವಂತೆ ಮಾಡುತ್ತವೆ. ಆದ್ದರಿಂದ ಮದ್ಯದಂಗಡಿ ಮಾರಾಟ ನಿಷೇಧಿಸಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥ ಸುರೇಂದ್ರ ಮಾತನಾಡಿ, ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯಮಾರಾಟ ಅಂಗಡಿ ತೆರೆಯಬಾರದು, ಇದರಿಂದ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಯುವಕರ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಭವಿಷ್ಯ ಹಾಳಾಗುತ್ತದೆ ಎಂದರು.
ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕಬ್ಬಾಳಮ್ಮನ ದೇಗುಲಕ್ಕೆ ಸಮೀಪವಿರುವ ಈ ಗ್ರಾಮದ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಮದ್ಯದ ಅಂಗಡಿ ನಿರ್ಮಾಣವಾಗಿದ್ದೇ ಆದರೆ, ಗ್ರಾಮದಲ್ಲಿ ಗಲಾಟೆ, ಗೂಂಡಾಗಿರಿಯಂತ ಅಹಿತಕರ ಘಟನೆಗಳು ನಡೆದು ಗ್ರಾಮದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತದೆ. ಶಾಂತಿ ಇರುವ ಗ್ರಾಮದಲ್ಲಿ ಅಶಾಂತಿ ಕೆಣಕಬೇಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ತಾಲೂಕಿನ ಮದ್ಯದ ಅಂಗಡಿಗಳಿಲ್ಲದ ಗ್ರಾಮಗಳನ್ನು ಮದ್ಯ ನಿಷೇಧ ಮುಕ್ತ ಗ್ರಾಮಗಳನ್ನಾಗಿಸಲು ಸಹಕಾರ ಬೇಕಾಗಿದೆ. ಕೆಲವು ಪ್ರಭಾವಿಗಳು ಇದರ ಹಿಂದೆ ಇದ್ದು, ಗ್ರಾಮದಲ್ಲಿಯೇ ಮದ್ಯದ ಅಂಗಡಿ ತೆರೆಯಲು ನಿರ್ಧರಿಸಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಗ್ರಾಮಸ್ಥರಾದ ಕರೀಗೌಡ, ರಾಜು, ಅನಿಲ್, ಶಿವಬಸವೇಗೌಡ, ಸುಂದರೇಶ್, ನಾಗರಾಜ್, ಚಂದ್ರ, ಉಮೇಶ್ ಇದ್ದರು.